ಚಿಕ್ಕಬಳ್ಳಾಪುರ : ವಿವಾದಿತ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸಿದ್ದ ಹೋರಾಟಕ್ಕೆ ಒಂದು ವರ್ಷ ಕಳೆದಿದೆ. ಈ ಹಿನ್ನೆಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳನ್ನು ಖಂಡಿಸಿ ನಗರದಲ್ಲಿ 'ಸಂಯುಕ್ತ ಹೋರಾಟ ಕರ್ನಾಟಕ' ಸಮಿತಿಯಿಂದ ಹೆದ್ದಾರಿ ತಡೆದು ಪ್ರತಿಭಟಿಸಲಾಯಿತು.
ಜಿಲ್ಲೆಯ ಬಾಗೇಪಲ್ಲಿ, ಶಿಡ್ಲಘಟ್ಟ, ಚಿಂತಾಮಣಿ ಮತ್ತು ಗೌರಿಬಿದನೂರು ತಾಲೂಕಿನಿಂದ ಆಗಮಿಸಿದ್ದ ರೈತರು ನಗರದ ಹೊರವಲಯದ ಚದುಲಪುರದ ರಾಷ್ಟ್ರೀಯ ಹೆದ್ದಾರಿ ತಡೆದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಬೆಂಗಳೂರು-ಹೈದರಾಬಾದ್ ರಸ್ತೆಯಲ್ಲಿ ಟ್ರ್ಯಾಕ್ಟರ್ ಮೂಲಕ ರ್ಯಾಲಿ ನಡೆಸಿ ಹೆದ್ದಾರಿ ಬಂದ್ ಮಾಡಿದರು. ಈ ಸಂದರ್ಭ ರಸ್ತೆಯಲ್ಲಿ ಹೂವು, ತರಕಾರಿ, ರಾಗಿ ಬೆಳೆಗಳನ್ನು ಚೆಲ್ಲಿ ಆಕ್ರೋಶ ಹೊರ ಹಾಕಿದರು.
ಈ ವೇಳೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, 'ಹೊಲಗದ್ದೆಗಳಲ್ಲಿ ದುಡಿಮೆ ಮಾಡಬೇಕಿದ್ದ ರೈತರು ಇಂದು ರಸ್ತೆಗೆ ಇಳಿದು ಹೋರಾಟ ಮಾಡುತ್ತಿದ್ದಾರೆ. ಇಂದು ಕೇಂದ್ರ ಸರ್ಕಾರ ರೈತರನ್ನು ಹೊಲಗದ್ದೆಗಳಿಂದ ಹೊರದಬ್ಬುವ ಕಾನೂನನ್ನು ಜಾರಿಗೆ ತಂದಿದೆ. ಮೋದಿಯವರು ಬರೀ ಮಾತಿನಲ್ಲಿ ಕಾನೂನನ್ನು ಜಾರಿಗೆ ತರಲಿಲ್ಲ. ಬದಲಿಗೆ ಸಾಂವಿಧಾನಿಕವಾಗಿ ಶಕ್ತಿಯನ್ನು ಕೊಟ್ಟರು' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಪ್ರತಿಭಟನೆಯಲ್ಲಿ 700ಕ್ಕೂ ಹೆಚ್ಚು ರೈತರು ಜೀವ ಬಿಟ್ಟಿದ್ದಾರೆ. ಅಲ್ಲಿ ಜೀವ ಕಳೆದುಕೊಂಡ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಬೇಕು. ತೆಲಂಗಾಣ ಸರ್ಕಾರ ಪ್ರತೀ ಕುಟುಂಬಕ್ಕೆ ₹3 ಲಕ್ಷ ನೀಡುವುದಾಗಿ ಘೋಷಿಸಿದೆ. ಆದರೆ, ಬೊಮ್ಮಾಯಿ ಅವರದ್ದು ರೈತ ವಿರೋಧಿ ಧೋರಣೆ ಹೊಂದಿರುವ ಸರ್ಕಾರ. ಆದ್ದರಿಂದ, ಕಾಯ್ದೆಗಳನ್ನು ವಾಪಸ್ ಪಡೆಯುವುದರ ಜೊತೆಗೆ ಪರಿಹಾರವನ್ನು ಘೋಷಿಸಬೇಕು ಎಂದು ಒತ್ತಾಯಿಸಿದರು.
ಓದಿ: ಬೆಂಗಳೂರು : ಕಡಲೆಕಾಯಿ ಪರಿಷೆಗೆ ಅದ್ಧೂರಿ ಸಿದ್ಧತೆ - ವ್ಯಾಪಾರಿಗಳ ಮುಖದಲ್ಲಿ ಸಂತಸ