ಚಿಕ್ಕಬಳ್ಳಾಪುರ: ನಾಳೆ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಮಧುಸೂದನ ಸಾಯಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಕಾಲೇಜ್ ಅಂಡ್ ರಿಸರ್ಚ್ ಆಸ್ಪತ್ರೆಗೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆ ಆಸ್ಪತ್ರೆಯ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗುತ್ತಿದೆ.
ಈ ಕುರಿತು ಮಾತನಾಡಿದ ಮಾಧ್ಯಮ ವ್ಯವಸ್ಥಾಪಕರಾದ ಗೋವಿಂದ ರೆಡ್ಡಿ ಅವರು, ನಾಳೆ ಪ್ರಧಾನಿ ಮೋದಿ ಅವರು ಹೆಲಿಪ್ಯಾಡ್ ಮೂಲಕ 10:50 ಕ್ಕೆ ಚಿಕ್ಕಬಳ್ಳಾಪುರಕ್ಕೆ ಬರುಲಿದ್ದು, 1 ಗಂಟೆಗಳ ಕಾಲ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮೊದಲು ಸರ್ ಎಂ ವಿಶ್ವೇಶ್ವರಯ್ಯ ಸಮಾಧಿಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಲಿದ್ದಾರೆ. ನಂತರ ವೇದಿಕೆ ಕಾರ್ಯಕ್ರಮಕ್ಕೆ ಭೇಟಿ ಕೊಡಲಿದ್ದು, ವೇದಿಕೆಯಲ್ಲೇ ಆಸ್ಪತ್ರೆಯನ್ನು ಉದ್ಘಾಟನೆ ಮಾಡಲಿದ್ದಾರೆ. ಸುಮಾರು 400 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಆಸ್ಪತ್ರೆಯಲ್ಲಿ 400 ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದು ಆರೋಗ್ಯ ಸೇವೆಯೂ ಸಹ ಸಂಪೂರ್ಣ ಉಚಿತವಾಗಿರುತ್ತದೆ. ಇನ್ನೂ ಆಸ್ಪತ್ರೆಯಲ್ಲಿ 22 ರೀತಿಯ ಲ್ಯಾಬ್ಗಳನ್ನು ತೆರೆಯಲಾಗಿದ್ದು ಪ್ರತಿಯೊಬ್ಬರು ಚಿಕಿತ್ಸೆ ಪಡೆದುಕೊಳ್ಳಲು ಸಹಾಯವಾಗಲಿದೆ ಎಂದು ತಿಳಿಸಿದರು.
ಇನ್ನೂ ಇದೇ ಸಂದರ್ಭದಲ್ಲಿ ಪೊಲೀಸ್ ಬಂದೋಬಸ್ತ್ ಬಗ್ಗೆ ಮಾಹಿತಿ ನೀಡಿದ ಚಿಕ್ಕಬಳ್ಳಾಪುರ ಎಸ್ಪಿ ಡಿಎಲ್ ನಾಗೇಶ್ ಅವರು, ಸರ್ ಎಂ ವಿಶ್ವೇಶ್ವರಯ್ಯ ಸಮಾಧಿ ಬಳಿಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಲಿದ್ದ ಬಳಿಕ ವೇದಿಕೆ ಕಾರ್ಯಕ್ರಮಕ್ಕೆ ಬರುವವರೆಗೂ ಸಂಪೂರ್ಣ ಭದ್ರತೆಯನ್ನು ನೀಡಲು ಈಗಾಗಲೇ ಪೂರ್ವ ತಯಾರಿ ನಡೆಸಲಾಗಿದೆ. ಈ ಕಾರ್ಯಕ್ರಮ ಸರ್ಕಾರೇತರವಾಗಿ ನಡೆಯುತ್ತಿರುವುದರಿಂದ ಮುದ್ದೇನಹಳ್ಳಿ ಗ್ರಾಮದ ಸುತ್ತಮುತ್ತ ಸರಿಸುಮಾರು 1300 ಪೋಲೀಸ್ ಸಿಬ್ಬಂದಿ ನಿಯೋಜನೆಗೊಳಿಸಲಾಗಿದ್ದು, 5 ಜಿಲ್ಲಾ ಎಸ್ಪಿಗಳನ್ನು ಭದ್ರತೆಗೆ ನಿಯೋಜನೆಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಯಾವುದೇ ಭದ್ರತಾ ಲೋಪ ಆಗದಂತೆ ಸೂಕ್ತ ಪೋಲೀಸ್ ಬಂದೋಬಸ್ತ್ ಒದಗಿಸಲಾಗಿದೆ ಎಂದು ಎಸ್ಪಿ ನಾಗೇಶ್ ಅವರು ಹೇಳಿದರು.
ನಾಳೆ ದಾವಣಗೆರೆ ಮಹಾಸಂಗಮದಲ್ಲಿ ಭದ್ರತೆ ಹೇಗಿದೆ? : ಈ ಕಾರ್ಯಕ್ರಮ ಮುಗಿಸಿ 12.30 ರ ಹೊತ್ತಿಗೆ ಪ್ರಧಾನಿ ಮೋದಿ ಅವರು ದಾವಣಗೆರೆಯಲ್ಲಿ ನಡೆಯಲಿರುವ ಮೋದಿ ಮಹಾಸಂಗಮ ಸಮಾವೇಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಇನ್ನೂ ಅಲ್ಲಿನ ಭದ್ರತೆ ಬಗ್ಗೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಅವರು, ಪೊಲೀಸ್ ಉಪ ಮಹಾನಿರೀಕ್ಷಕ ತ್ಯಾಗರಾಜನ್ ಅವರ ನೇತೃತ್ವದಲ್ಲಿ ಸಕಲ ಭದ್ರತೆ ಮಾಡಲಾಗಿದ್ದು, ಸುಮಾರು 10 ಸಾವಿರ ಬಸ್ ಬರುವ ನಿರೀಕ್ಷೆಯಿದೆ. ಭದ್ರತಾ ದೃಷ್ಟಿಯಿಂದ 2500 ಸಿಬ್ಬಂದಿ ನೇಮಕ ಮಾಡಲಾಗಿದೆ. 7 ಎಸ್ಪಿ, ಸಾಕಷ್ಟು ಪ್ರಮಾಣದಲ್ಲಿ ಎಎಸ್ಪಿ, ಡಿವೈಎಸ್ಪಿ, 600 ಮಂದಿ ಟ್ರಾಫಿಕ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಈ ಹಿಂದೆ ನಡೆದ ಸಮಾವೇಶದಲ್ಲಿ ಟ್ರಾಫಿಕ್ ಸಮಸ್ಯೆ ಆಗಿತ್ತು. ಆ ಕಾರಣದಿಂದಾಗಿ ಈ ಬಾರಿಯ ಹೈವೇಲಿ ಟ್ರಾಫಿಕ್ ಜಾಮ್ ಆಗಬಾರದು ಎಂದು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ :ನಾಳೆ ಕರ್ನಾಟಕಕ್ಕೆ ಪ್ರಧಾನಿ ಮೋದಿ: ಈ ವರ್ಷ ಏಳನೇ ಭೇಟಿ