ಚಿಕ್ಕಬಳ್ಳಾಪುರ: ಜೈಲಿನಿಂದ ಬಂದ ಯುವಕನೊಬ್ಬ ಪ್ರಿಯತಮೆಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಭಗತ್ ಸಿಂಗ್ ನಗರದಲ್ಲಿ ನಡೆದಿದೆ.
ಚಿಂತಾಮಣಿ ಮೂಲದ ಹೇಮಂತ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ 22 ವರ್ಷದ ಸಂಗೀತಾ ಮದುವೆಯಾಗಿ ಮಗುವಾದ ನಂತರ ಕೌಟುಂಬಿಕ ಕಲಹದ ಹಿನ್ನೆಲೆ ವಿಚ್ಛೇದನ ಪಡೆದಿದ್ದಳು.
ಈ ವೇಳೆ ಅದೇ ನಗರದ ಹೇಮಂತ್ ಎಂಬ ಯುವಕನ ಜೊತೆ 2 ವರ್ಷಗಳಿಂದ ಲಿವಿಂಗ್ ಟುಗೆದರ್ ರಿಲೇಶನ್ನಲ್ಲಿದ್ದರು ಎನ್ನಲಾಗಿದೆ. ಆದರೆ, ಕೆಲ ತಿಂಗಳಿನಿಂದ ಹೇಮಂತ್ ಹಾಗೂ ಸಂಗೀತಾ ನಡುವೆ ಮನಸ್ತಾಪ ಉಂಟಾಗಿ ಜಗಳವಾಗಿತ್ತು. ಇದೇ ಕಾರಣಕ್ಕೆ ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಹೇಮಂತ್ ತನ್ನ ಸಹವಾಸಕ್ಕೆ ಬರಬಾರದು ಅಂತ ಮುಚ್ಚಳಿಕೆ ಬರೆಸಿಕೊಂಡಿದ್ದಳಂತೆ.
5 ದಿನದ ಹಿಂದೆಯಷ್ಟೇ ಬಿಡುಗಡೆ
ಆದ್ರೆ ಹೇಮಂತ್ ಕುಡಿದ ಅಮಲಿನಲ್ಲಿ ಸಂಗೀತ ತಂದೆಯ ಬೈಕ್ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ಪ್ರಕರಣ ಸಂಬಂಧ ಹೇಮಂತ್ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಸದ್ಯ 5 ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಹೇಮಂತ್ ಸಂಗೀತಾ ವಾಸವಾಗಿದ್ದ ಮನೆಗೆ ಬಂದಿದ್ದು, ಈ ವೇಳೆ ಆಕೆಯ ಜೊತೆ ಇನ್ನೋರ್ವ ಯುವಕ ಇದ್ದದ್ದು ಕಂಡು ಬಂದಿದೆ, ಅಲ್ಲದೇ ಅವರಿಬ್ಬರು ಸೇರಿ ಹಲ್ಲೆ ಮಾಡಿ ಹೇಮಂತ್ನನ್ನು ಹೊರಹಾಕಿದ್ದಾರೆ.
ಇದರಿಂದ ಕುಪಿತನಾದ ಹೇಮಂತ್ ತಡರಾತ್ರಿ ಹೊಂಚು ಹಾಕಿ ಮನೆಗೆ ನುಗ್ಗಿ ಸಂಗೀತಾಳ ಹೊಟ್ಟೆ, ಬೆನ್ನಿನ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ಸದ್ಯ ಚಿಕ್ಕಬಳ್ಳಾಪುರ ನಗರ ಪೊಲೀಸರು ಆರೋಪಿ ಹೇಮಂತ್ನನ್ನ ಬಂಧಿಸಿದ್ದು, ಸಂಗೀತಾಳನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.