ಚಿಂತಾಮಣಿ/ಚಿಕ್ಕಬಳ್ಳಾಪುರ: ಪ್ರಸಿದ್ಧ ಯಾತ್ರಾ ಸ್ಥಳ ಕೈವಾರ ಕ್ಷೇತ್ರದ ಬೆಟ್ಟದ ಮೇಲೆ ಪದೇ ಪದೆ ಚಿರತೆ ಪ್ರತ್ಯಕ್ಷವಾಗುತ್ತಿದ್ದು, ಸ್ಥಳೀಯರಿಗೆ ಹಾಗೂ ಅರಣ್ಯ ಇಲಾಖೆಗೆ ನಿದ್ದೆಗೆಡಿಸುವಂತಾಗಿದೆ. ಚಿರತೆ ಓಡಾಡುತ್ತಿದ್ದ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಶ್ರೀ ಕ್ಷೇತ್ರ ಕೈವಾರದಲ್ಲಿ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದು, ಜನಜಂಗುಳಿಯಿಂದ ಕೂಡಿರುತ್ತಿತ್ತು. ಆದರೆ ಕೊರೊನಾ ಹಿನ್ನೆಲೆ ಭಕ್ತಾದಿಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಇದರಿಂದ ಅರಣ್ಯ ಇಲಾಖೆಗೆ ಕೊಂಚ ನೆಮ್ಮದಿ ಸಿಕ್ಕಂತಾಗಿದೆ.
ಪ್ರತಿನಿತ್ಯ ಬೆಟ್ಟದ ಮೇಲೆ ಇರುವ ಬಕಾಸುರ ಹಾಗೂ ಭೀಮನ ಯುದ್ಧದ ಗುರುತುಗಳನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಅದೇ ಬೆಟ್ಟದ ಮೇಲೆ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕಳೆದ ಎರಡು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಕೈವಾರ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಯ ಜನರು ಭಯಭೀತರಾಗಿದ್ದಾರೆ. ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳು ಬೆಟ್ಟದ ಮೇಲೆ ಸಾಕಷ್ಟು ಬಾರಿ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಪದೇ ಪದೆ ಚಿರತೆಗಳು ಪ್ರತ್ಯಕ್ಷವಾಗುತ್ತಿದ್ದು, ಅಧಿಕಾರಿಗಳ ನಿದ್ದೆಗೆಡಿಸುವಂತಾಗಿದೆ. ಸದ್ಯ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಬಲೆ ಬೀಸಿದ್ದಾರೆ.