ಚಿಂತಾಮಣಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ರಾಜ್ಯಾಧ್ಯಕ್ಷ ಜೆ.ವಿ.ರಘುನಾಥ ರೆಡ್ಡಿ ಮಾತನಾಡಿ, ಚಿಂತಾಮಣಿ ತಾಲೂಕು ಅತಿ ದೊಡ್ಡ ತಾಲೂಕಾಗಿದ್ದರಿಂದ ಕೆಸಿ ವ್ಯಾಲಿ ಮತ್ತು ಎತ್ತಿನಹೊಳೆ ಯೋಜನೆಗಳ ಮೂಲಕ ಎಲ್ಲಾ ಕೆರೆಗಳಿಗೆ ತುಂಬಿಸಬೇಕು. ಕೂಡಲೇ ಸರ್ಕಾರ ಹೊಸ ಭೂ ಸುಧಾರನಾ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು. ಈ ಕಾಯ್ದೆಯಿಂದ ರೈತರಿಗೆ ಯಾವುದೇ ಅನುಕೂಲವಿಲ್ಲ. ಅದೇ ರೀತಿ ಹಾಲಿನ ದರವನ್ನು 4 ರೂ. ಕಡಿಮೆ ಮಾಡುವ ಆದೇಶವನ್ನು ಕೂಡ ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಗಳನ್ನು ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಕೈಗಾರಿಕಾ ವಾಣಿಜ್ಯ ಕಾಯ್ದೆ, ಗುತ್ತಿಗೆ ಕಾರ್ಮಿಕರ ನಿಯಂತ್ರಣ ಕಾಯ್ದೆ ಸೇರಿದಂತೆ ಹಲವು ರೈತ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ತಹಶೀಲ್ದಾರ್ ಮುಖಾಂತರ ಮನವಿ ಮಾಡಿದ್ದೇವೆ ಎಂದರು.