ಚಿಕ್ಕಬಳ್ಳಾಪುರ: 5 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಇಂದು ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ನಗರದ ಸರ್ ಎಂ.ವಿ ಕ್ರೀಡಾಂಗಣ, ಚಿಂತಾಮಣಿ ನಗರದಲ್ಲಿ ಝಾನ್ಸಿ ಕ್ರೀಡಾಂಗಣ, ಶಿಡ್ಲಘಟ್ಟ ನಗರ್ತ ಸರ್ಕಲ್ ಸೇರಿದಂತೆ ಬಾಗೇಪಲ್ಲಿ, ಗೌರಿಬಿದನೂರು, ಗುಡಿಬಂಡೆ ಪಟ್ಟಣದಲ್ಲಿ ಯೋಗ ದಿನಾಚರಣೆ ಕಳೆಗಟ್ಟಿತ್ತು.
ಕೇಂದ್ರಿಯ ಯೋಗ ಸೇವಾ ಪ್ರಾಕೃತಿಕ ಚಿಕಿತ್ಸಾ ಅನುಸಂಧಾನ್ ಪರಿಷತ್, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಪತಾಂಜಲಿ ಯೋಗ ಸಮಿತಿ ಸಹಯೋಗದೊಂದಿಗೆ ಯೋಗ ದಿನಾಚರಣೆಯನ್ನು ನಡೆಸಿದ್ದು, ಜಿಲ್ಲಾಧಿಕಾರಿ ಅನಿರುದ್ ಶ್ರವಣ್, ಸಿಇಓ ಗುರುದತ್ ಹೆಗಡೆ ಸೇರಿದಂತೆ ಜಿಲ್ಲೆಯ ಇತರೆ ಇಲಾಖೆ ಅಧಿಕಾರಿಗಳು, ತಾಲೂಕು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಲ್ಲರೂ ಯೋಗ ಮಾಡುವಂತೆ ಪ್ರೇರೇಪಿಸಿದರು.
ಯೋಗದಲ್ಲಿ ಅಂತಾರಾಷ್ಟ್ರೀಯ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಅನಿರುದ್ ಶ್ರವಣ್ ಸನ್ಮಾನಿಸಿದರು. ಇದೇ ವೇಳೆ ಮಾತನಾಡಿದ ಅವರು, ತಮ್ಮ ಯುಪಿಎಸ್ಸಿ ತರಬೇತಿ ಸಂದರ್ಭದಲ್ಲಿ ಪ್ರತಿನಿತ್ಯ ಯೋಗ ಮಾಡುತ್ತಿದ್ದ ದಿನಗಳನ್ನು ಮೆಲುಕು ಹಾಕಿದರು. ಈಗ ವಾರಕ್ಕೆ ನಾಲ್ಕು ಬಾರಿಯಾದ್ರು ಯೋಗವನ್ನು ಮಾಡುತ್ತಿರುವುದಾಗಿ ತಿಳಿಸಿದರು.