ಚಿಕ್ಕಬಳ್ಳಾಪುರ: ಖಚಿತ ಮಾಹಿತಿ ಮೇರೆಗೆ ಬಿಜೆಪಿ ಮುಖಂಡರು ಹಾಗೂ ಡಿಎಸ್ಎಸ್ ತಂಡ ದಾಳಿ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ ದನದ ಮೂಳೆ ಮತ್ತು ಕೊಂಬುಗಳನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಬಾಗೇಪಲ್ಲಿ ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ.
ಕಸಬಾ ಹೋಬಳಿಯ ಪೊತೇಪಲ್ಲಿಗೆ ಹಾದುಹೋಗುವ ಮುಖ್ಯರಸ್ತೆ ಬಳಿ ಕಳೆದ ದಿನ ಸಂಜೆ ಸುಮಾರು 7 ಗಂಟೆ ವೇಳೆಗೆ ಲಾರಿಯಲ್ಲಿ ಸತ್ತ ಪ್ರಾಣಿಗಳ ಎಲುಬು ಮತ್ತು ಕೊಂಬುಗಳನ್ನು ಚೀಲದಲ್ಲಿ ತುಂಬಿ ಲೋಡ್ ಮಾಡಲಾಗುತ್ತಿತ್ತು. ಬಾಗೇಪಲ್ಲಿ ಹಾಗೂ ಆಂಧ್ರದ ಕಡೆಯಿಂದ ಚಿಕ್ಕ ಚಿಕ್ಕ ವಾಹನಗಳಲ್ಲಿ ಕೊಂಬುಗಳನ್ನು ಇಲ್ಲಿಗೆ ತಂದು ಲೋಡ್ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ತಾಲೂಕಿನ ಬಿಜೆಪಿ ಹಾಗೂ ಡಿಎಸ್ಎಸ್ ತಂಡ ಏಕಾಏಕಿ ದಾಳಿ ಮಾಡಿ 50 ಕೋಟಿ ರೂ. ಮೌಲ್ಯದ ದನದ ಮೂಳೆ ಮತ್ತು ಕೊಂಬುಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸ್ ಉಪ ನಿರೀಕ್ಷಕರಾದ ಗೋಪಾಲ್ ರೆಡ್ಡಿ ಹಾಗೂ ಪೊಲೀಸ್ ಸಿಬ್ಬಂದಿ ನರಸಿಂಹ ಮುರ್ತಿ, ನಟರಾಜ್ ಲಾರಿ ಚಾಲಕರನ್ನು ಬಂಧಿಸಿ, ಬೊಲೆರೋ ಮತ್ತು ಕ್ಯಾಂಟರ್ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ತಾಲೂಕು ಬಿಜೆಪಿ ಮಂಡಲಾಧ್ಯಕ್ಷ ಆರ್. ಪ್ರತಾಪ್ ಮಾತನಾಡಿ, ಸುಪ್ರೀಂಕೋರ್ಟ್ ಆದೇಶದಂತೆ ಅಕ್ರಮವಾಗಿ ಗೋವಧೆ, ಪ್ರಾಣಿ ವಧೆ, ಸಾಗಣೆ ಮಾಡುವುದು ಶಿಕ್ಷಾರ್ಹ ಅಪರಾಧ. ಪ್ರಾಣಿಗಳ ಕೊಂಬುಗಳು ಹಾಗೂ ಎಲುಬುಗಳನ್ನು ಕೇರಳ ರಾಜ್ಯಕ್ಕೆ ಸಾಗಿಸುತ್ತಿರುವುದನ್ನು ಚಾಲಕರೇ ಒಪ್ಪಿಕೊಂಡಿದ್ದು, ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕುವಂತೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗೋಪಾಲ್ ರೆಡ್ಡಿ ಅವರಿಗೆ ಒತ್ತಾಯಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಾರ್ಯಕರ್ತರು, ಡಿ.ಎಸ್.ಎಸ್. ನಾಯಕರಾದ ನಾಗಪ್ಪ, ಪೋತೇಪೆಲ್ಲಿ ಗ್ರಾಮಸ್ತರಾದ ರವಿ, ರಮೇಶ್, ಶ್ರೀನಿವಾಸ್ ಮತ್ತು ಇತರರು ಉಪಸ್ಥಿತರಿದ್ದರು.