ಚಿಕ್ಕಬಳ್ಳಾಪುರ : ಕೋವಿಡ್ ಸೋಂಕು ಬಂದರೆ ಏನಾಗುತ್ತದೆ ಎಂಬುವುದರ ಬಗ್ಗೆ ಜನರಿಗೆ ಅರಿವಿದೆ. ಆದರೂ, ನನಗೆ ಬಂದಿಲ್ಲವಲ್ಲ ಎಂಬ ಭಾವನೆಯಿಂದ ಜನ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದರು.
ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಿಲ್ಲೆಗೆ ಆಗಮಿಸಿದ ವೇಳೆ ಮಾತನಾಡಿದ ಅವರು, ಕೋವಿಡ್ ಮೊದಲನೇ ಅಲೆಗಿಂತ ಎರಡನೇ ಅಲೆಯ ತೀವ್ರತೆ ಕಡಿಮೆ ಇದ್ದರೂ, ಸೋಂಕು ಹೆಚ್ಚಿಗೆ ಹರಡುತ್ತದೆ. ಸೋಂಕು ಹೆಚ್ಚಾದರೆ ಆಸ್ಪತ್ರೆಗಳಲ್ಲಿ ಒತ್ತಡ ಹೆಚ್ಚಾಗುತ್ತೆ.
ಆಸ್ಪತ್ರೆಗಳಲ್ಲಿ ಸಾಮರ್ಥ್ಯ ಕಡಿಮೆ ಇದೆ, ಇದರಿಂದ ತೊಂದರೆಯಾಗಲಿದೆ. ಹಾಗಾಗಿ, ಮುಖ್ಯಮಂತ್ರಿಗಳು ಎಲ್ಲಾ ಇಲಾಖೆಗಳ ಜೊತೆ ಮಾತನಾಡಿ ರಾಜ್ಯಾದ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಇದಕ್ಕೆ ಸಾರ್ವಜನಿಕರ ಸಹಕಾರ ಬೇಕಾಗುತ್ತದೆ ಎಂದರು.
ಓದಿ : ರಾಜ್ಯದಲ್ಲಿ 10 ಲಕ್ಷ ದಾಟಿದ ಸೋಂಕಿತರ ಸಂಖ್ಯೆ: ಇಂದು 4,373 ಜನರಿಗೆ ಕೊರೊನಾ
ರಾಜ್ಯದಲ್ಲಿ 5,500 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಕನಿಷ್ಠ 100 ಜನ 1 ಲಸಿಕಾ ಕೇಂದ್ರದಲ್ಲಿ ಲಸಿಕೆ ತೆಗೆದುಕೊಂಡರೂ, ಐದುವರೆ ಲಕ್ಷ ಜನ ಲಸಿಕೆ ಪಡೆಯಬಹುದು. ಆದರೆ, ಪ್ರತಿ ದಿನ ಕೇವಲ 1 ರಿಂದ ಒಂದೂವರೆ ಲಕ್ಷ ಜನ ಮಾತ್ರ ಲಸಿಕೆ ಪಡೆಯುತ್ತಿದ್ದಾರೆ. ಅದು ಕೂಡ ಸರ್ಕಾರ ಪರಿಶ್ರಮದಿಂದ ಅರಿವು ಮೂಡಿಸಿ ಲಸಿಕೆ ಪಡೆದುಕೊಳ್ಳುವಂತೆ ಮಾಡಿಸುತ್ತಿದೆ.
ಲಸಿಕೆ ಇರುವುದು ನಮಗೆಲ್ಲರಿಗೂ ರಾಮ ಬಾಣವಿದಂತೆ. ಹಾಗಾಗಿ, 45 ವರ್ಷ ಮೇಲ್ಪಟ್ಟ ಎಲ್ಲರೂ ಸ್ವಯಂ ಪ್ರೇರಿತರಾಗಿ ಲಸಿಕೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಹೊಸ ಮಾರ್ಗಸೂಚಿಗೆ ಆಕ್ಷೇಪಗಳು ವ್ಯಕ್ತವಾದ ಬಗ್ಗೆ ಪ್ರತಿಕ್ರಿಯಿಸಿ, ಆಕ್ಷೇಪಗಳು ಇರುವುದು ಸಹಜ. ಸರ್ಕಾರ ಆರೂವರೆ ಕೋಟಿ ಜನತೆಯ ಹಿತ ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಂಡಿದೆ ಎಂದರು.