ಚಿಕ್ಕಬಳ್ಳಾಪುರ: ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಡಾ. ಸುಧಾಕರ್ ಅವರು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಆಸ್ಪತ್ರೆ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡರು.
ಗೌರಿಬಿದನೂರು ಸರ್ಕಾರಿ ಆಸ್ಪತ್ರೆ ಸಮಸ್ಯೆಗಳ ಬಗ್ಗೆ ಸಚಿವರಿಗೆ ಸಾಕಷ್ಟು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಖುದ್ದಾಗಿ ಪರಿಶೀಲನೆ ನಡೆಸುವ ಸಂಬಂಧ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಅವ್ಯವಸ್ಥೆಯನ್ನು ಕಂಡು ಸಚಿವರು ಕೆಂಡಾಮಂಡಲವಾಗಿ ಆರೋಗ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಆಂಬ್ಯುಲೆನ್ಸ್ ಕೊರತೆ , ವೈದ್ಯರ ಅಭಾವ, ಸರಿಯಾಗಿ ಸರಬರಾಜಾಗದ ಔಷಧಿ.. ಸೇರಿದಂತೆ ಅನೇಕ ಸಮಸ್ಯೆಗಳ ಕುರಿತಂತೆ ರೋಗಿಗಳು ಹಾಗೂ ಸ್ಥಳೀಯರು ಸಚಿವರಲ್ಲಿ ದೂರಿದರು. ಇದರಿಂದ ಕೋಪಗೊಂಡ ಸಚಿವರು, ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ತಾಕೀತು ಮಾಡಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಔಷಧಿಗಳ ಕೊರೆತೆಯ ಕುರಿತು ಕೇಂದ್ರದ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಜನೌಷಧಿಯಿಂದ ಸಾಮಾನ್ಯ ಜನರಿಗೆ ಔಷಧಿಗಳನ್ನು ತಗೆದುಕೊಳ್ಳಲು ಅನುಕೂಲವಾಗುತ್ತದೆ. ಜನೌಷಧಿಯ ಕಾರ್ಯಕ್ರಮವನ್ನು ರಾಜ್ಯದ 2500 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತೆರೆದು ಎಲ್ಲರಿಗೂ ಉಪಯೋಗ ಮಾಡಬೇಕೆಂದು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.