ಚಿಕ್ಕಬಳ್ಳಾಪುರ: ಪ್ರಪಂಚದಾದ್ಯಂತ ಹರಡಿರುವ ಮಹಾಮಾರಿ ಕೊರೊನಾ ವೈರಸ್ ನಿಂದ ತಪ್ಪಿಸಿಕೊಳ್ಳಲು ಸರ್ಕಾರ ಸಾಕಷ್ಟು ಶ್ರಮವಹಿಸುತ್ತಿರುವ ಬೆನ್ನಲ್ಲೇ ಜಿಲ್ಲೆಯ ಗೌರಿಬಿದನೂರು ತಹಸೀಲ್ದಾರ್ ಎಂ. ರಾಜಣ್ಣ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮುಂದಾಗಿದ್ದಾರೆ.
ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಪಂಚಾಯಿತಿಯಿಂದ ಆಯೋಜಿಸಿದ್ದ ಕೊರೊನಾ ವೈರಸ್ ಅರಿವು ಮೂಡಿಸುವ ರಥ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ತಾಲೂಕಿನಲ್ಲಿ ಎಲ್ಲ ಇಲಾಖೆಯವರು ಸಹ ಕೊರೊನಾ ವೈರಸ್ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಈಗ ತಾಲೂಕು ಆರೋಗ್ಯ ಇಲಾಖೆಯಿಂದ ತಾಲೂಕಿನಾದ್ಯಂತ ಅರಿವು ಮೂಡಿಸಲು ಮುಂದಾಗಿದ್ದು, ಪ್ರತಿ ಮನೆ ಮನೆಗೂ ತೆರಳಿ ಕೊರೊನಾ ವೈರಸ್ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಕೊರೊನಾ ವೈರಸ್ ಮೊದಲು ಚೀನಾ ದೇಶದ ವುಹಾನ್ ನಲ್ಲಿ ಪತ್ತೆಯಾಗಿ ಪ್ರಪಂಚದ ಇಟಲಿ, ದುಬೈ ಇನ್ನಿತರ ದೇಶಗಳಲ್ಲಿ ಹರಡಿ ನಮ್ಮ ದೇಶಕ್ಕೂ ಕೂಡ ಹೆಜ್ಜೆ ಇಟ್ಟಿದೆ ಆದುದರಿಂದ ಸಾರ್ವಜನಿಕರು ಕೊರೊನಾ ವೈರಸ್ ಸೊಂಕು ಹರಡದಂತೆ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೋಳ್ಳಬೇಕು ಎಂದು ತಿಳಿಸಿದರು.