ಚಿಕ್ಕಬಳ್ಳಾಪುರ: ಇತ್ತಿಚ್ಚೇಗಷ್ಟೇ ಗೌರಿಬಿದನೂರಿನ ಐತಿಹಾಸಿಕ ಪುರಾಣ ಪ್ರಸಿದ್ಧ ವಿದುರಾಶ್ವತ್ಥ ದೇವಸ್ಥಾನದಲ್ಲಿ ಕೋಟ್ಯಂತರ ಅವ್ಯವಹಾರ, ಸ್ಥಳೀಯ ಶಾಸಕ ಹಾಗೂ ಮಾಜಿ ಸಚಿವ ಶಿವಶಂಕರ್‌ರೆಡ್ಡಿ ಕುಮ್ಮಕ್ಕಿನಿಂದ ನಡೆದಿದೆ ಎಂದು ಬಿಜೆಪಿ ಕಾರ್ಯಕಾರಣಿ ಸದಸ್ಯ ರವಿನಾರಾಯಣ ರೆಡ್ಡಿ ಗಂಭೀರವಾಗಿ ಆರೋಪಿಸಿದ್ದಾರೆ.
ಹಣ ದುರುಪಯೋಗದ ಸಂಪೂರ್ಣ ವರದಿ: 2017 ಆಗಸ್ಟ್ 02 ರಿಂದ 2019 ಆಗಸ್ಟ್ 26 ಅವರಿಗೂ ಐತಿಹಾಸಿಕ ಪುರಾಣ ಪ್ರಸಿದ್ಧ ವಿದುರಾಶ್ವತ್ಥ ಅಶ್ವತ್ಥ ನಾರಾಯಣ ಸ್ವಾಮಿ ದೇಗುಲದಲ್ಲಿ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಚೆಕ್ಕುಗಳ ವಿತರಣೆಯಲ್ಲಿ ಲೋಪ ದೋಷಗಳನ್ನು ಮಾಡಿ ಹಣ ದುರ್ಬಳಕೆ ಆಗಿರುವುದು ಕಂಡು ಬಂದಿರುತ್ತದೆ. ಚೆಕ್ ವಿತರಣೆ ಉಸ್ತುವಾರಿ ವಹಿಸಿಕೊಂಡಿದ್ದ ಡಾಟಾ ಎಂಟ್ರಿ ಆಪರೇಟರ್ ಶ್ರುತಿ ಹಾಗೂ ಡಿ ಗ್ರೂಪ್ ನೌಕರ ಸುರೇಶ್ ಸೇರಿ ದೇವಾಲಯದ ಸುಮಾರು 60 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಲಪಟಾಯಿಸಿದ್ದಾರೆ ಎಂಬ ಆರೋಪ ಇದೆ.
ಆಡಳಿತಾಧಿಕಾರಿ ಗುರುಪ್ರಸಾದ್ ಬೇರೆಡೆಗೆ ವರ್ಗಾವಣೆಯಾದಾಗ ನೂತನವಾಗಿ ತಾಲೂಕು ದಂಡಾಧಿಕಾರಿಯಾಗಿ ಬಂದ ತಹಶೀಲ್ದಾರ್ ಶ್ರೀನಿವಾಸ್ ಅವರು ದೇವಸ್ಥಾನದ ವಹಿವಾಟುಗಳನ್ನು ಪರಿಶೀಲನೆ ನಡೆಸಿದಾಗ ಅವ್ಯವಹಾರ ಬೆಳಕಿಗೆ ಬಂದಿದೆ. ಹೀಗಾಗಿ ಈ ಸಂಬಂಧ ಸಂಪೂರ್ಣ ಪರಿಶೀಲನೆ ನಡೆಸಿದಾಗ ಮೇಲ್ನೋಟಕ್ಕೆ ಲಕ್ಷಾಂತರ ದುರುಪಯೋಗ ಆಗಿರುವುದು ಸಾಬೀತಾಗಿದ್ದು, ತನಿಖೆ ನಂತರ ಸತ್ಯಾಸತ್ಯತೆ ಹೊರಬೀಳಲಿದೆ ಎಂದು ಹೇಳಿದ್ದರು.
ತಹಶೀಲ್ದಾರ್ ಶ್ರೀನಿವಾಸ್ ಅವರು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ ಪ್ರಕರಣದ ಪ್ರಮುಖ ಆರೋಪಿ ಗುರುಪ್ರಸಾದ್ ಅವರನ್ನು ದೂರಿನಲ್ಲಿ ಉಲ್ಲೇಖ ಮಾಡಿಲ್ಲ ಹಾಗೂ ಅವರ ರಕ್ಷಣೆಗೆ ಸ್ಥಳೀಯ ಶಾಸಕರು ಹಾಗೂ ತಹಶೀಲ್ದಾರ್ ಶ್ರೀನಿವಾಸ್ ಕುಮ್ಮಕ್ಕಿನಿಂದ ಡಿ ಗ್ರೂಪ್ ಕೆಲಸ ಮಾಡುವಂತೆ ನೌಕರರ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ಮಾಡಿದ್ದಾರೆ ಎಂದು ರವಿನಾರಾಯಣ ರೆಡ್ಡಿಯವರು ಆರೋಪಿಸಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಗುರು ಪ್ರಸಾದ್ ವಿರುದ್ದ ಕಾನೂನು ರೀತಿ ಕ್ರಮ ಕೈಗೊಂಡಿಲ್ಲ ಅಂದರೆ ಮುಂದಿನ ದಿನಗಳಲ್ಲಿ ಬಿಜೆಪಿ ಈ ಸಂಬಂಧ ಪ್ರತಿಭಟನೆ ಮಾಡುತ್ತದೆ ಎಂದೂ ಇದೇ ವೇಳೆ ಅವರು ಎಚ್ಚರಿಕೆ ನೀಡಿದ್ದಾರೆ.