ಚಿಕ್ಕಬಳ್ಳಾಪುರ: ಎರಡೂವರೆ ಲಕ್ಷ ರೂ. ಪಡೆದು ನಕಲಿ ರೈಸ್ ಪುಲ್ಲಿಂಗ್ ಚೆಂಬು ನೀಡಿ ಮೋಸ ಮಾಡಿದ ಎಂದು ಆತನ ಮಗನನ್ನೇ ಅಪಹರಿಸಿದ್ದ ಘಟನೆ ಗೌರಿಬಿದನೂರು ತಾಲೂಕಿನ ದೇವಗಾನಹಳ್ಳಿಯಲ್ಲಿ ನಡೆದಿದೆ.
ದೂರು ದಾಖಲಿಸಿಕೊಂಡು ಕೂಡಲೇ ಕ್ರಮ ಕೈಗೊಂಡ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದೇ ವೇಳೆ ಕಿಡ್ನಾಪ್ ಆಗಿದ್ದ 16 ವರ್ಷದ ಬಾಲಕನನ್ನು ರಕ್ಷಿಸಿದ್ದಾರೆ. ದಾಮೋದರ್ ಹಾಗೂ ಈತನ ಸಹಚರರಾದ ಮುತ್ತು ಶೆಟ್ಟಿ ಮಣಿಕುಮಾರ್, ಶೇಕ್ ಭಾಷಾ, ಜಾಸ್ಸಿ ಲೋಕೇಶ್ ಕುಮಾರ್ ಬಂಧಿತರು.
ಪ್ರಕರಣ ಹಿನ್ನೆಲೆ..
ಜೂನ್ 30 ರಂದು ನಾಲ್ವರು ಅಪರಿಚಿತರು ಬಾಲಕನ ತಂದೆ ಪಾಪಣ್ಣನನ್ನು ಹುಡುಕಿಕೊಂಡು ಅವರ ಮನೆ ಬಳಿ ಬಂದಿದ್ದಾರೆ. ಈ ವೇಳೆ ಪತ್ನಿ ಚೌಡಮ್ಮ, ತನ್ನ ಪತಿ ಜಮೀನಿನಲ್ಲಿ ಕೆಲಸ ಮಾಡುವುದಾಗಿ ತಿಳಿಸಿದ್ದಾಳೆ. ಆಗ 16 ವರ್ಷದ ಬಾಲಕನನ್ನು ತಂದೆ ಇರುವ ಸ್ಥಳ ತೋರಿಸುವಂತೆ ಕಿಡಿಗೇಡಿಗಳು ತಮ್ಮ ಜತೆ ಕರೆದೊಯ್ದಿದ್ದಾರೆ. ಸಂಜೆಯಾದರೂ, ಮಗ ಮನೆಗೆ ಬಾರದ ಕಾರಣ ಪೋಷಕರು ಆತಂಕಕ್ಕೀಡಾಗಿದ್ದಾರೆ. ಅಂದು ಸಂಜೆ ಕಿಡಿಗೇಡಿಗಳು ಪಾಪಣ್ಣನಿಗೆ ಕರೆ ಮಾಡಿ, ಎರಡೂವರೆ ಲಕ್ಷ ರೂಪಾಯಿ ಕೊಟ್ಟರೆ ಮಾತ್ರ ನಿಮ್ಮ ಮಗ ಬದುಕುಳಿಯುತ್ತಾನೆ. ಇಲ್ಲವಾದರೆ, ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಬಾಲಕನ ತಾಯಿ ಚೌಡಮ್ಮ ತನ್ನ ಮಗನನ್ನು ಬಿಟ್ಟುಬಿಡುವಂತೆ ಪರಿಪರಿಯಾಗಿ ಬೇಡಿಕೊಂಡರೂ ಆರೋಪಿಗಳು ಪ್ರತಿಕ್ರಿಯಿಸಿಲ್ಲ. ಈ ಎಲ್ಲಾ ಮಾಹಿತಿಗಳೊಂದಿಗೆ ಚೌಡಮ್ಮ ಹಾಗೂ ಪಾಪಣ್ಣ ಗೌರಿಬಿದನೂರು ಗ್ರಾಮಾಂತರ ಠಾಣೆಗೆ ದೂರು ನೀಡಿದರು.
ಪ್ರಕರಣ ಬೇಧಿಸಿದ್ಹೇಗೆ?
ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು, ಡಿವೈಎಸ್ಪಿ ನೇತೃತ್ವದಲ್ಲಿ ಸಿಪಿಐ ಗೌರಿಬಿದನೂರು ವೃತ್ತ, ಚಿಕ್ಕಬಳ್ಳಾಪುರ, ಚಿಂತಾಮಣಿ ಮತ್ತು ಪಿಎಸ್ಐ, ಗೌರಿಬಿದನೂರು ಗ್ರಾಮಾಂತರ ಠಾಣೆಯ ಪೊಲೀಸರನ್ನೊಳಗೊಂಡಂತೆ ಮೂರು ತಂಡಗಳನ್ನು ರಚಿಸಿದರು. ಪ್ರಕರಣ ದಾಖಲಾದ ಕೇವಲ 10 ಗಂಟೆಯಲ್ಲಿ ಬಾಲಕನನ್ನು ರಕ್ಷಿಸಿ ನಾಲ್ವರು ಆರೋಪಿಗಳನ್ನು ಖೆಡ್ಡಾಗೆ ಕೆಡವಿದ್ದಾರೆ.
ಕಿಡ್ನ್ಯಾಪ್ ಆಗಿದ್ದೇಕೆ?
ದೇವಗಾನಹಳ್ಳಿ ಗ್ರಾಮದ ಪಾಪಣ್ಣ ಹಾಗೂ ನಾಲ್ವರು ಸಹಚರರು ಆಂಧ್ರ ಮೂಲದ ದಾಮೋದರಂಗೆ ನಕಲಿ ರೈಸ್ ಪುಲ್ಲಿಂಗ್ ಚೆಂಬು ನೀಡಿ ಎರಡೂವರೆ ಲಕ್ಷ ಹಣ ಪಡೆದು ಮೋಸ ಮಾಡಿದ್ದರು. ಮೋಸ ಹೋದ ವಿಷಯ ತಿಳಿದ ದಾಮೋದರ್ ಹಣ ವಾಪಸ್ ನೀಡುವಂತೆ ದುಂಬಾಲು ಬಿದ್ದಿದ್ದಾನೆ. ಆದರೆ, ಈ ನಾಲ್ವರು ಹಣ ವಾಪಸ್ ಕೊಟ್ಟಿರಲಿಲ್ಲ. ಹೀಗಾಗಿ ಪಾಪಣ್ಣನ ಮಗನನ್ನು ಅಪಹರಿಸಿದ್ದಾರೆ.
ಇದನ್ನೂ ಓದಿ:ಚಾಕುವಿನಿಂದ ಬೆದರಿಸಿ, ಹೆಂಡತಿಗಾಗಿ ಸೀರೆ ಕದ್ದವನ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ದೂರು ದಾಖಲು