ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲೂಕಿನ ಆಂಧ್ರದ ಗಡಿಗೆ ಹೊಂದಿಕೊಂಡಿರುವ ಚಿಂತಲಪಲ್ಲಿ ಗ್ರಾಮವು ಸಂಗೀತಗಾರರ ಗ್ರಾಮವೆಂದು ಪ್ರಖ್ಯಾತಿ ಪಡೆದುಕೊಂಡಿದೆ. ಆದರೆ, ಇಲ್ಲಿ ಕುಡುಕರ ಹಾವಳಿಯಿಂದ ಜನರು ಬೇಸತ್ತಿದ್ದರು. ಇಲ್ಲಿನ ಸಂಗೀತಗಾರರು ಮೈಸೂರು ಮಹಾರಾಜರ ಆಸ್ಥಾನದ ವಿದ್ವಾಂಸರಾಗಿಯೂ ಸೇವೆ ಸಲ್ಲಿಸಿದ್ದು, ಈಗಲೂ ರಾಜ್ಯದ ಹಲವು ಕಡೆ ಸಂಗೀತದ ಶಾಲೆಗಳನ್ನು ನಡೆಸುತ್ತಿದ್ದಾರೆ.
ಈ ಗ್ರಾಮದಲ್ಲಿ ವಾಸಿಸುತ್ತಿರುವ ಸುಮಾರು 250 ಕುಟುಂಬಗಳು ಕುಡುಕರ ಹಾವಳಿಯಿಂದ ಬೇಸತ್ತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನೂ ಚಿಂತಲಪಲ್ಲಿ ಗ್ರಾಮ ಗಡಿ ಭಾಗದಲ್ಲಿರುವುದರಿಂದ ಬಹುತೇಕ ಜನ ಮದ್ಯಪಾನಕ್ಕಾಗಿ ಸರ್ಕಾರಿ ಶಾಲೆಯ ಆವರಣವನ್ನು ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಡಿಕೊಂಡಿದ್ದರು.
ನೆರೆಯ ಆಂಧ್ರಪ್ರದೇಶದ ಹಿಂದೂಪುರದಲ್ಲಿ ಕೊರೊನಾ ಮಿತಿಮೀರಿದೆ. ಅಷ್ಟೇ ಅಲ್ಲದೆ ಮದ್ಯದ ಬೆಲೆ ದುಬಾರಿಯಾದರಿಂದ ಇಲ್ಲಿಗೆ ಧಾವಿಸುತ್ತಿದ್ದು ಮಾಸ್ಕ್, ಸಾಮಾಜಿಕ ಅಂತರ ಕಾಪಾಡದೆ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.
ಇದನ್ನೂ ಓದಿ: ಸಂಗೀತಗಾರರ ವಂಶಸ್ಥರ ಗ್ರಾಮದಲ್ಲೀಗ ಕುಡುಕರ ಹಾವಳಿ..ಸರ್ಕಾರಿ ಶಾಲೆಯನ್ನು ಬಿಡದ ಕುಡುಕರು
ಈ ಬಗ್ಗೆ ಈಟಿವಿ ಭಾರತ ‘ಸಂಗೀತಗಾರರ ವಂಶಸ್ಥರ ಗ್ರಾಮದಲ್ಲೀಗ ಕುಡುಕರ ಹಾವಳಿ..ಸರ್ಕಾರಿ ಶಾಲೆಯನ್ನು ಬಿಡದ ಕುಡುಕರು’ ಎಂಬ ಶೀರ್ಷಿಕೆಯಡಿ ಸಂಕ್ಷಿಪ್ತ ವರದಿ ಪ್ರಕಟಿಸಿತ್ತು.
ಈ ಮೂಲಕ ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿಗಳ ಗಮನ ಸೆಳೆದಿದ್ದು, ಈಗ ಬಾರ್‌ಗಳನ್ನು ಮುಂದಿನ ಜನವರಿವರೆಗೂ ಮುಚ್ಚಿಸುವಂತೆ ಆದೇಶ ಹೊರಡಿಸಲಾಗಿದೆ. ಗ್ರಾಮದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.