ಚಿಕ್ಕಬಳ್ಳಾಪುರ: ಜಿಲ್ಲೆಯ ಚೇಳೂರು ಹೋಬಳಿಯ ಸಜ್ಜಲವಾರಿಪಲ್ಲಿ ಗ್ರಾಮದಲ್ಲಿ ಸರ್ವೇ ನಂಬರ್.146 ರ 1 ಎಕರೆ 8 ಕುಂಟೆಯ ಸರ್ಕಾರಿ ಖರಾಬು ಜಮೀನನ್ನು ಸ್ಮಶಾನಕ್ಕಾಗಿ ಕಾಯ್ದಿರಿಸಲು ಕೋರಿ ಸಜ್ಜಲವಾರಿಪಲ್ಲಿ ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸಿದರು.
ಸಜ್ಜಲವಾರಿಪಲ್ಲಿ ಗ್ರಾಮದಲ್ಲಿ ಜನರು ಶವಸಂಸ್ಕಾರ ಮಾಡಲು ತೊಂದರೆ ಅನುಭವಿಸುತ್ತಿದ್ದಾರೆ. ಕೆಲವರು ತಮ್ಮ ಸ್ವಂತ ಹೊಲ-ಗದ್ದೆಗಳಲ್ಲಿ ಶವಗಳನ್ನು ಹೂಳುತ್ತಿದ್ದು, ಇನ್ನೂ ಕೆಲವರಿಗೆ ಜಮೀನಿಲ್ಲದೆ ಶವಸಂಸ್ಕಾರ ಮಾಡಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಸಜ್ಜಲವಾರಿಪಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಸಜ್ಜಲವಾರಿಪಲ್ಲಿ ಗ್ರಾಮದ ಸುಭಾಶ್ ಅವರು ಮಾತನಾಡಿ ಸರ್ಕಾರಿ ಜಮೀನು ಸರ್ವೇ ನಂಬರ್.146 ರಲ್ಲಿ 1 ಎಕರೆ 8 ಕುಂಟೆ ಸರ್ಕಾರಿ ಜಮೀನಿದ್ದು, ಈ ಜಮೀನನ್ನು ಸಾರ್ವಜನಿಕರ ಸ್ಮಶಾನಕ್ಕಾಗಿ ಕಾಯ್ದಿರಿಸುವಂತೆ ಸುಮಾರು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರೂ ಸಹ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ. ಕೆಲವರು 1 ಎಕರೆ 8 ಕುಂಟೆ ಜಮೀನನ್ನು ಒತ್ತುವರಿ ಮಾಡಿಕೊಂಡು ಉಳುಮೆ ಮಾಡಲು ಸಹ ಯತ್ನಿಸುತ್ತಿದ್ದಾರೆ. ಇನ್ನೂ ಈ ಜಾಗದಲ್ಲಿ ತಮ್ಮ ಪೂರ್ವಜರ ಸಮಾಧಿಗಳು ಸಹ ಕೆಡವಿ ಉಳಿಮೆ ಮಾಡಿರುತ್ತಾರೆ.
ಗ್ರಾಮಲೆಕ್ಕಾಧಿಕಾರಿಗಳಾದ ಅನಿಲ್ ಅವರಿಗೆ ಅರ್ಜಿ ಸಲ್ಲಿಸಿ 2 ವರ್ಷಗಳಾದರೂ ಸಹ ಸಾರ್ವಜನಿಕರ ಸ್ಮಶಾನಕ್ಕಾಗಿ ಯಾವುದೇ ರೀತಿಯ ಕಾನೂನಿನ ಕ್ರಮಕೈಗೊಂಡಿಲ್ಲವೆಂದು ಸಜ್ಜಲವಾರಿಪಲ್ಲಿ ಗ್ರಾಮಸ್ಥರು ಆರೋಪಿಸಿದರು. ಗ್ರಾಮದಲ್ಲಿ ಸುಮಾರು 500 ಕ್ಕಿಂತ ಅಧಿಕ ಜನರು ವಾಸಮಾಡಲಾಗುತ್ತಿದ್ದು ಶವಸಂಸ್ಕಾರಕ್ಕಾಗಿ ಬಡವರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದರು.