ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಕಾರಕೂರು ಕ್ರಾಸ್ ಬಳಿ ಅರೆಬೆತ್ತಲೆಯಾಗಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ.
ವೇಲ್‍ನಿಂದ ಕತ್ತು ಬಿಗಿದು ಕೊಲೆ ಮಾಡಲಾಗಿದೆ ಎನ್ನಲಾಗಿದ್ದು, ಬಾಗೇಪಲ್ಲಿಯಿಂದ ಚಿಂತಾಮಣಿಗೆ ಹೋಗುವ ರಸ್ತೆಯ ಕಾರಕೂರು ಕ್ರಾಸ್ ಬಳಿಯ ನಿರ್ಮಾಣ ಹಂತದ ಬಡವಾಣೆಯ ಕಮಾನು ಗೋಡೆಯ ಸೆಕ್ಯೂರಿಟಿ ಗಾರ್ಡ್ ಕೊಠಡಿಯಲ್ಲಿ ಶವ ಪತ್ತೆಯಾಗಿದೆ. ಮಾಹಿತಿ ತಿಳಿದ ತಕ್ಷಣ ಬಾಗೇಪಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ನಂತರ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮೃತ ಮಹಿಳೆ ಸುಮಾರು 30 ವರ್ಷ ಆಸುಪಾಸಿನವರಾಗಿದ್ದು, ಆಕೆಯ ಗುರುತು ಮತ್ತು ವಿಳಾಸ ಇನ್ನೂ ಪತ್ತೆಯಾಗಿಲ್ಲ. ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.