ಚಿಕ್ಕಬಳ್ಳಾಪುರ : ನಂದಿ ಬೆಟ್ಟಕ್ಕೆ ಎರಡು ದಿನಗಳ ಕಾಲ ಪ್ರವಾಸಿಗರಿಗೆ ಜಿಲ್ಲಾಡಳಿತ ನಿಷೇಧ ಹೇರಿದೆ. ಆದರೆ, ಮಾಹಿತಿ ಕೊರತೆಯಿಂದ ಬಂದ ಪ್ರವಾಸಿಗರು ವಾಪಸ್ ತೆರಳುತ್ತಿದ್ದಾರೆ.
ಸಂಜೆ 6 ಗಂಟೆಯಿಂದ ನಂದಿಗಿರಿಧಾಮ ಬಂದ್ ಮಾಡಲಾಗಿದ್ದು, ಪ್ರವಾಸಿಗರು ನಿರಾಸೆಯಿಂದ ಹಿಂದಿರುಗುತ್ತಿದ್ದಾರೆ. ನಂದಿಬೆಟ್ಟದ ಕ್ರಾಸ್ ಬಳಿ ಪೊಲೀಸ್ ನಿಯೋಜನೆ ಮಾಡಲಾಗಿದ್ದು, ಬ್ಯಾರಿಗೇಡ್ ಎಳೆದು ವಾಹನಗಳನ್ನು ತಡೆದು ವಾಪಸ್ ಕಳುಹಿಸುತ್ತಿದ್ದಾರೆ. ಜನವರಿ 2ರವರೆಗೆ ನಂದಿ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶವನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ.
ನಿಯಮ ಪಾಲನೆಗೆ ಖಾಕಿ ಸೂಚನೆ :
ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿ ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹೋಟೆಲ್, ರೆಸ್ಟೋರೆಂಟ್ ಮತ್ತು ಕೆಫೆ ಮಾಲೀಕರಿಗೆ ಸೂಚಿಸಿದ್ದರು.
ರಾತ್ರಿ 10 ಗಂಟೆ ಬಳಿಕ ಯಾವುದೇ ಮ್ಯೂಸಿಕ್, ಪಾರ್ಟಿ ಮತ್ತಿತ್ತರ ಚಟುವಟಿಕೆಗಳನ್ನು ವ್ಯವಸ್ಥೆ ಮಾಡಬಾರದು. ಒಂದು ವೇಳೆ ನಿಯಮ ಮೀರಿ ಓಪನ್ ಮಾಡಿದರೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.