ಚಿಕ್ಕಬಳ್ಳಾಪುರ: ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ನೈತಿಕತೆ ಬಗ್ಗೆ ಮಾತನಾಡುವ ಯಾವುದೇ ಅರ್ಹತೆ ಇಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಆಡಳಿತದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ಸಾಕಷ್ಟು ಜನ ಬಿಜೆಪಿ ಸೇರಿಕೊಂಡಿದ್ದಾರೆ. ಯಾರು ಎಷ್ಟೇ ಷಡ್ಯಂತ್ರ ಮಾಡಿದರೂ ಸುಧಾಕರ್ರನ್ನು ಸೋಲಿಸಲು ಸಾಧ್ಯವಾಗುವುದಿಲ್ಲ ಎಂದರು.
ಪ್ರತಿಪಕ್ಷಗಳಿಗೆ ಪಂಚ ಪ್ರಶ್ನೆಗಳನ್ನು ಹಾಕಿದ ಸಿ.ಟಿ.ರವಿ:
1.ಕನಕಪುರಕ್ಕೆ ಮೆಡಿಕಲ್ ಕಾಲೇಜು ತೆಗೆದುಕೊಂಡು ಹೋಗಿದ್ದು ನ್ಯಾಯಾನಾ?
2.ಸಮ್ಮಿಶ್ರ ಸರ್ಕಾರದಲ್ಲಿ ಚಿಕ್ಕಬಳ್ಳಾಪುರ ಕೊಟ್ಟ ಕೊಡುಗೆ ಏನು?
3.ನೈತಿಕ ರಾಜಕಾರಣದ ಬಗ್ಗೆ ಮಾತಾನಾಡುತ್ತಾರೆ, ಯಾವುದು ನೈತಿಕ ರಾಜಕಾರಣ?
4. ಜಿಲ್ಲಾ ಕಾಂಗ್ರೆಸ್-ಜೆಡಿಎಸ್ ವಶದಲ್ಲಿ ಇತ್ತು. ಯಾಕೆ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗಲಿಲ್ಲ?
5.ಅನರ್ಹ ಮಾಡಲು ರಾಜೀನಾಮೆ ಕೊಟ್ಟ ಶಾಸಕರಿಗೆ ಕಾಲಾವಕಾಶ ಕೊಡಬೇಕಿತ್ತು, ಯಾಕೇ ನೀಡಲಿಲ್ಲ?
ಹೀಗೆ ಪಂಚ ಪ್ರಶ್ನೆಗಳನ್ನು ಕೇಳಿದ ಸಿ.ಟಿ.ರವಿ, ಎಲ್ಲಾ ಪ್ರಶ್ನೆಗಳಿಗೂ ಪ್ರತಿಪಕ್ಷಗಳು ಉತ್ತರಿಸಬೇಕೆಂದು ಆಗ್ರಹಿಸಿದ್ರು.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ನಂತರ ಸಿದ್ದರಾಮಯ್ಯರಿಗೆ ನೈತಿಕತೆ ಇದ್ದಿದ್ರೆ ರಾಜೀನಾಮೆ ನೀಡಬೇಕಾಗಿತ್ತು. ರಾಜೀನಾಮೆ ಕೊಟ್ಟು ರಾಹುಲ್ ಗಾಂಧಿ ಮರ್ಯಾದೆ ಉಳಿಸಿಕೊಂಡ್ರು. ಆದರೆ ಕರ್ನಾಟಕದಲ್ಲಿ ಯಾವೊಬ್ಬ ರಾಜಕಾರಣಿ ರಾಜೀನಾಮೆ ಕೊಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.