ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ ಗಣೇಶೋತ್ಸವ ಪ್ರಯುಕ್ತ ಜನಜಂಗುಳಿ ಕಂಡುಬಂದಿದೆ. ಜಿಲ್ಲೆಯ ಚಿಂತಾಮಣಿ, ಬಾಗೇಪಲ್ಲಿ, ಶಿಡ್ಲಘಟ್ಟ, ಗೌರಿಬಿದನೂರಿನಲ್ಲಿ ಸಾರ್ವಜನಿಕರು ಹಬ್ಬದ ನೆಪದಲ್ಲಿ ಸಾಮಾಜಿಕ ಅಂತರ ಮರೆತು ವ್ಯಾಪಾರ ವಹಿವಾಟಿಗೆ ಸೈ ಎಂದಿದ್ದಾರೆ.
ಸದ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,300ರ ಗಡಿದಾಟುತ್ತಿದ್ದು ಆರೋಗ್ಯ ಇಲಾಖೆ ಸೇರಿದಂತೆ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆದರೆ ಜಿಲ್ಲೆಯ ಜನತೆ ಮಾತ್ರ ಅದ್ಯಾವುದಕ್ಕೂ ತಲೆಕೆಸಿಕೊಳ್ಳದೆ ಕೋವಿಡ್ ನಿಯಮ ಗಾಳಿಗೆ ತೂರಿ ಹಬ್ಬದ ತಯಾರಿಯಲ್ಲಿ ತೊಡಗಿದ್ದು ಕಂಡುಬಂದಿದೆ.
ಗಣೇಶೋತ್ಸವ ವೇಳೆ ಕೊರೊನಾ ಹರಡುವ ಭೀತಿಯಲ್ಲಿ ರಾಜ್ಯ ಸರ್ಕಾರ ನಿಯಾಮಾವಳಿಗಳನ್ನು ಜಾರಿ ಮಾಡಿದೆ. ಆದರೆ ಮಾರುಕಟ್ಟೆಯಲ್ಲಿ ಜನಸಂದಣಿ ಸೇರಿದ್ದು, ಯಾವ ನಿಯಮವೂ ಪಾಲನೆ ಆಗದಿರುವುದು ಕಂಡುಬಂದಿದೆ.