ಚಿಕ್ಕಬಳ್ಳಾಪುರ : ರಾತ್ರಿ ಗ್ಯಾಸ್ ಲೀಕ್ ಆದ ಹಿನ್ನೆಲೆ ಮುಂಜಾನೆ ಮನೆಯ ಲೈಟ್ ಸ್ವಿಚ್ ಆನ್ ಮಾಡಿದ ವೇಳೆ ಸಿಲಿಂಡರ್ ಸ್ಫೋಟಗೊಂಡು ಮನೆಯಲ್ಲಿದ್ದ ದಂಪತಿ ಗಂಭೀರವಾಗಿ ಗಾಯಗೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ನಡೆದಿದೆ. ನಗರದ ಕಲ್ಲೂಡಿ ಬಡಾವಣೆಯ ವಿನಯ್ ಹಾಗೂ ನಂದಿನಿ ಎಂಬುವರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ದಂಪತಿ.
ಗಾಯಗೊಂಡಿರುವ ದಂಪತಿ ವಿನಯ್ ನಗರದಲ್ಲಿ ಟ್ರ್ಯಾಕ್ಟರ್, ನೀರಿನ ಟ್ಯಾಂಕರ್ಗಳನ್ನು ಓಡಿಸಿ ಸಾಮಾನ್ಯ ಜೀವನ ನಡೆಸುತ್ತಿದ್ದರು. ಕಳೆದ ರಾತ್ರಿ ಟ್ರ್ಯಾಕ್ಟರ್ ಕೆಲಸ ಮುಗಿಸಿ ಬಂದು ಮನೆಯಲ್ಲಿ ಮಲಗಿದ್ದರು.
ರಾತ್ರಿ ವೇಳೆ ಗ್ಯಾಸ್ ಲೀಕ್ ಆಗಿದ್ದು, ದಂಪತಿಗೆ ಗೊತ್ತಾಗಿಲ್ಲ. ಮುಂಜಾನೆ 5 ಗಂಟೆಗೆ ಲೈಟ್ ಸ್ವಿಚ್ ಆನ್ ಮಾಡಿದ ವೇಳೆ ಸಿಲಿಂಡರ್ ಸ್ಫೋಟಗೊಂಡಿದ್ದು, ಮನೆ ಛಿದ್ರ ಛಿದ್ರವಾಗಿದೆ.
ಗಂಭೀರವಾಗಿ ಗಾಯಗೊಂಡ ದಂಪತಿಯನ್ನು ಮೊದಲು ನಗರದ ಆಸ್ಪತ್ರೆಗೆ ದಾಖಲಿಸಲಾಯಿತು. ತದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದು, ಸದ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಉಕ್ರೇನ್: ಆಹಾರ, ನೀರಿಲ್ಲದೇ ಬಂಕರ್ನಲ್ಲಿ ಸಿಲುಕಿರುವ ಮೈಸೂರಿನ ವಿದ್ಯಾರ್ಥಿನಿ
ಅಕ್ಕಪಕ್ಕದ ನಾಲ್ಕೈದು ಮನೆಗಳು ಬಿರುಕು ಬಿಟ್ಟಿದ್ದು, ಕುಟುಂಸ್ಥರು ಭಯಭೀತರಾಗಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಸೇರಿದಂತೆ ನಗರಠಾಣೆ ಇನ್ಸ್ಪೆಕ್ಟರ್, ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.