ಚಿಕ್ಕಬಳ್ಳಾಪುರ : ಸರ್ಕಾರಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿಲ್ಲ ಎಂಬ ಆರೋಪಗಳೇ ಸಾಮಾನ್ಯವಾಗಿ ಕೇಳಿ ಬರುತ್ತಿರುತ್ತವೆ. ಆದರೆ, ಇಲ್ಲೊಬ್ಬ ಸರ್ಕಾರಿ ಅಧಿಕಾರಿ ಉತ್ತಮ ಕಾರ್ಯವೊಂದನ್ನು ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಜಿಲ್ಲೆಯ ಗೌರಿಬಿದನೂರು ನಗರಸಭೆಯ ಪೌರಾಯುಕ್ತ ಚಲಪತಿ ಕೊರೊನಾ ಪರಿಸ್ಥಿತಿಯ ನಿರ್ವಹಣೆಯ ಒತ್ತಡದ ನಡುವೆಯೂ ಕಸ ಹಾಕುವ ಜಾಗದಲ್ಲಿ ಕೃಷಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಸುಮಾರು 15 ಎಕರೆಯಷ್ಟು ವಿಶಾಲ ಜಾಗವನ್ನು ಹೊಂದಿರುವ ನಗರಸಭೆಯ ಕಸ ಸಂಗ್ರ ಘಟಕದಲ್ಲಿ ಗಿಡ ಗಂಟಿಗಳಿಂದ ತುಂಬಿ ಖಾಲಿ ನಿರುಪಯುಕ್ತವಾಗಿದ್ದ ಜಾಗದಲ್ಲಿ ಪೌರಾಯುಕ್ತ ಚಲಪತಿ , ತೊಗರಿ, ಅವರೆ, ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ. ಚಲಪತಿಯವರಿಗೆ ಆರೋಗ್ಯಾಧಿಕಾರಿ ಸುರೇಶ್ ಹಾಗೂ ಸುಮಾರು 59 ರಷ್ಟು ಪೌರ ಕಾರ್ಮಿಕರು ಸಾಥ್ ನೀಡಿದ್ದಾರೆ. ಇನ್ನು ಬೆಳೆಗಳಿಗೆ ಬೇಕಾಗುವ ಗೊಬ್ಬರ ಕೂಡ ಕಸ ಸಂಗ್ರಹ ಘಟಕಕ್ಕೆ ಬರುವ ತ್ಯಾಜ್ಯಗಳಿಂದ ತಯಾರಿಸಿ ಬಳಸಿಕೊಂಡಿದ್ದಾರೆ. ಸದ್ಯ ಮೂರುವರೆ ಎಕರೆ ಜಾಗದಲ್ಲಿ ಬೆಳೆ ಬೆಳೆಯಲಾಗಿದ್ದು, ಇಲ್ಲಿ ಬೆಳೆದಿರುವ ತರಕಾರಿಗಳನ್ನು ಪೌರ ಕಾರ್ಮಿಕರಿಗೆ ವಿತರಿಸಲಾಗುತ್ತದೆ ಎಂದು ಚಲಪತಿಯವರು ತಿಳಿಸಿದ್ದಾರೆ.