ಚಿಕ್ಕಬಳ್ಳಾಪುರ : ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳವು ಪ್ರಕರಣಗಳಲ್ಲಿ ಪತ್ತೆ ಮಾಡಿರುವ ಒಟ್ಟು 41,21,744 ರೂ. ಮೌಲ್ಯದ ವಿವಿಧ ವಸ್ತುಗಳನ್ನು ಚಿಕ್ಕಬಳ್ಳಾಪುರ ಕೇಂದ್ರ ವಲಯದ ಪೊಲೀಸ್ ಮಹಾ ನಿರೀಕ್ಷಕ ಎಂ.ಚಂದ್ರಶೇಖರ್ ವಾರಸುದಾರರಿಗೆ ಹಸ್ತಾಂತರಿಸಿದರು.
ಜಿಲ್ಲಾ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಕಳವು ಮಾಡಿದ ವಸ್ತುಗಳನ್ನು ಮಾಲೀಕರಿಗೆ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪೊಲೀಸ್ ಮಹಾನಿರೀಕ್ಷಕರು, ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ 4.90 ಲಕ್ಷ ರೂ. ಮೌಲ್ಯದ 98 ಗ್ರಾಂ ತೂಕದ ಬಂಗಾರದ ಒಡವೆಗಳು, 45,000 ರೂ. ಮೌಲ್ಯದ 2 ಲ್ಯಾಪ್ಟಾಪ್, 34,000 ರೂ.ಮೌಲ್ಯದ 1 ಕಂಪ್ಯೂಟರ್, 14 ಲಕ್ಷ ರೂ. ಮೌಲ್ಯದ 56 ಬೋರ್ವೆಲ್ ಬಿಟ್ಗಳು ಹಾಗೂ 5.60 ಲಕ್ಷ ರೂ. ಮೌಲ್ಯದ ಬೊಲೆರೋ ಟೆಂಪೋ ಸೇರಿ ಒಟ್ಟು 25.29 ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಶಿಡ್ಲಘಟ್ಟ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಸುಮಾರು 2,59,744 ರೂ. ಮೌಲ್ಯದ 18 ಮೊಬೈಲ್ ಫೋನ್ಗಳು ಮತ್ತು 1 ಡಿವಿಆರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಅದೇ ರೀತಿ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ 10 ಲಕ್ಷ ರೂ. ಮೌಲ್ಯದ ಅಶೋಕ್ ಲೇಲ್ಯಾಂಡ್ ದೋಸ್ತ್ ವಾಹನ, ಅಪೇ ಆಟೋ, ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ 85,000 ರೂ. ಬೆಲೆ ಬಾಳುವ 1 ದ್ವಿಚಕ್ರ ವಾಹನ, ನಗರ ಠಾಣೆಯಲ್ಲಿ 83,000 ರೂ. ಮೌಲ್ಯದ ಎರಡು ದ್ವಿಚಕ್ರ ವಾಹನ, ಬಟ್ಲಹಳ್ಳಿ ಠಾಣೆಯಲ್ಲಿ 2.50 ಲಕ್ಷ ರೂ. ಮೌಲ್ಯದ 54 ಗ್ರಾಂ ಬಂಗಾರದ ನೆಕ್ಲೇಸ್ ಮತ್ತು ಲಾಂಗ್ ಚೈನುಗಳನ್ನು ಪತ್ತೆ ಮಾಡಿ ಮಾಲೀಕರಿಗೆ ವಿತರಿಸಲಾಗಿದೆ ಎಂದರು.
ಇದೇ ವೇಳೆ ಕಳವು ಪ್ರಕರಣಗಳ ಪತ್ತೆಯಲ್ಲಿ ಉತ್ತಮ ಕೆಲಸ ಮಾಡಿದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದನೆ ಸಲ್ಲಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಕೆ ಮಿಥುನ್ ಕುಮಾರ್, ಚಿಕ್ಕಬಳ್ಳಾಪುರ ಡಿವೈಎಸ್ಪಿ ವಾಸುದೇವ್, ಚಿಂತಾಮಣಿ ಡಿವೈಎಸ್ಪಿ ಲಕ್ಷ್ಮಯ್ಯ ಹಾಗೂ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.
ಓದಿ: ಬೆಂಗಳೂರು: ಹಾಡಹಗಲೇ ಚಾಕುವಿನಿಂದ ಕತ್ತು ಸೀಳಿ ದಂಪತಿಯ ಬರ್ಬರ ಹತ್ಯೆ.. 4 ವಿಶೇಷ ತನಿಖಾ ತಂಡ ರಚನೆ