ಚಿಕ್ಕಬಳ್ಳಾಪುರ: ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿಂತಾಮಣಿ ತಾಲೂಕಿನ ಅಂಬಾಜಿ ದುರ್ಗ ಹೋಬಳಿಯ ನಾರಾಯಣಹಳ್ಳಿ ಗ್ರಾಮದಲ್ಲಿ ಇಂದು ನಡೆದಿದೆ. ಇವರಲ್ಲಿ ಬಾಲಕ ಮೃತಪಟ್ಟಿದ್ದು, ಉಳಿದ ಮೂವರ ಸ್ಥಿತಿ ಗಂಭೀರವಾಗಿದೆ.
ನಾರಾಯಣಹಳ್ಳಿ ಗ್ರಾಮದ ಮಂಜುನಾಥ್ (45) ಹಾಗೂ ಹನುಮಕ್ಕ (35) ದಂಪತಿಯು ತಮ್ಮ ಮಕ್ಕಳಾದ ಮನಿರಾಜು (20) ಮತ್ತು 14 ವರ್ಷದ ಮಗ ವಿಷ ಸೇವಿಸಿದ್ದಾರೆ. ಘಟನೆ ತಿಳಿದ ಅಕ್ಕಪಕ್ಕದ ಮನೆಯವರು ಇವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಹೊಸಕೋಟೆಯ ಎಂವಿಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಬಾಲಕ ಸಾವನ್ನಪ್ಪಿದ್ದಾನೆ.
ಗಂಭೀರ ಸ್ಥಿತಿಯಲ್ಲಿರುವ ಉಳಿದ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಎಸ್ಎನ್ಆರ್ ಆಸ್ಪತ್ರೆಗೆ ರವಾನಿಸಲಾಗಿದೆ. ಕುಟುಂಬದ ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಂಡ್ಯದಲ್ಲಿ ಹರಿದ ನೆತ್ತರು.. ತಡರಾತ್ರಿ ಯುವಕನ ಕರೆಸಿಕೊಂಡು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ