ಚಿಕ್ಕಬಳ್ಳಾಪುರ: ಕಳೆದ ಒಂದು ತಿಂಗಳ ಹಿಂದೆ ಬೌದ್ಧ ದರ್ಮದ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿ ತಗಲಾಕ್ಕೊಂಡಿದ್ದ ಸಚಿವರೊಬ್ಬರು, ಅದರ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದರು. ಆದರೆ ಸಚಿವರು ಮಾಡಿದ ಮೊತ್ತೊಂದು ಎಡವಟ್ಟಿನಿಂದ ದಲಿತ ಸಮುದಾಯದ ಮುಖಂಡರು ಮತ್ತಷ್ಟು ಕೆರಳಿ ಕೆಂಡವಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಸಚಿವ ಸುಧಾಕರ್ ಅಧ್ಯಕ್ಷತೆಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆಗೆ ಪೂರ್ವಭಾವಿ ಸಭೆ, ಬಾಬು ಜಗಜೀವನರಾಮ್ ಭವನದ ಶಂಕುಸ್ಥಾಪನೆ ಮತ್ತು ಜಯಂತಿಯನ್ನು ಹಮ್ಮಿಕೊಂಡಿದ್ದರು. ಈ ಯಾವ ಕಾರ್ಯಕ್ರಮಗಳಿಗೂ ದಲಿತರ ಮುಖಂಡರನ್ನು ಆಹ್ವಾನಿಸಿಲ್ಲ ಎಂದು ಮಾಜಿ ಶಾಸಕ ಮುನಿಯಪ್ಪ ಸಚಿವ ಸುಧಾಕರ್ ವಿರುದ್ಧ ತಿರುಗಿಬಿದ್ದಿದ್ದಾರೆ.
ಎಸ್ಸಿ, ಎಸ್ಟಿಗಳ ಅಭಿವೃದ್ಧಿಗೆ ಸಹಕಾರ ನೀಡದ ಸಚಿವರು: 2016ರಿಂದ ಚಿಕ್ಕಬಳ್ಳಾಪುರದ ಶಾಸಕರಾಗಿರುವ ಡಾ. ಕೆ ಸುಧಾಕರ್ ಎಸ್ಸಿ, ಎಸ್ಟಿ ಕಾರ್ಪೋರೇಷನ್ ಕಮಿಟಿ ಮೆಂಬರ್ ಆಗಿ ಜಿಲ್ಲೆಯ ದಲಿತರಿಗೆ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ, ಗಂಗಾಕಲ್ಯಾಣ ಯೋಜನೆ, ಬಗುರುಕಂ ಯೋಜನೆಯಲ್ಲಿ ದಲಿತರಿಗೆ ಸಿಗಬೇಕಾದ ನ್ಯಾಯ ಕೊಡಿಸುವಲ್ಲಿ ಚಿಕ್ಕಬಳ್ಳಾಪುರದ ಶಾಸಕ ಡಾ. ಕೆ ಸುಧಾಕರ್ ವಿಫಲರಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
2017 ರಲ್ಲಿ ಮೂರುವರೆ ಕೋಟಿ ಹಣ ಜಗಜೀವನ್ ರಾಮ್ ಭವನಕ್ಕೆ ಬಿಡುಗಡೆ ಆಗಿದೆ. ಇದುವರೆಗೂ ಗುದ್ದಲಿ ಪೂಜೆ ಮಾಡದೇ ಏಕಾಏಕಿ ಇವತ್ತು ಮಾಡಿರುವ ಉದ್ದೇಶ ಏನು, ದಲಿತರ ದಿಕ್ಕು ತಪ್ಪಿಸುತ್ತಿರುವ ಸಚಿವ ಸುಧಾಕರ್ ವಿರುದ್ಧ ಮುಂದಿನ ದಿನಗಳಲ್ಲಿ ದಲಿತರು ತಕ್ಕ ಉತ್ತರ ಕೊಡಬೇಕು ಎಂದು ದಲಿತ ಮುಖಂಡರು ಸಮುದಾಯಕ್ಕೆ ಕರೆ ಕೊಟ್ಟಿದ್ದಾರೆ. ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಸಚಿವ ಸುಧಾಕರ್ ವಿರುದ್ಧ ದಲಿತ ಸಮುದಾಯಗಳ ವಿರೋಧಿ ಅಲೆ ಬಿರುಸಾಗಿ ಬೀಸುತ್ತಿದೆ. ಒಂದು ಡ್ಯಾಮೇಜ್ ಕಂಟ್ರೋಲ್ಗೆ ಮುಂದಾದ ಸಚಿವರು ಗೊತ್ತೋ ಗೊತ್ತಿಲ್ಲದೆಯೋ ಮೊತ್ತೊಂದು ಡ್ಯಾಮೇಜ್ ಕ್ರಿಯೇಟ್ ಮಾಡಿಕೊಳ್ತಾ ಇದ್ದಾರೆ ಎಂಬ ಮಾತುಗಳು.
ಇದನ್ನೂ ಓದಿ: ₹705 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ: ಸಚಿವ ಎಂಟಿಬಿ