ಚಿಕ್ಕಬಳ್ಳಾಪುರ: ಟ್ರೆಕ್ಕಿಂಗ್ ವೇಳೆ ಬೆಟ್ಟದಿಂದ ಜಾರಿ ಬಿದ್ದು ಅಸ್ವಸ್ಥಗೊಂಡಿದ್ದ ಯುವಕನನ್ನು ಸತತ ಪ್ರಯತ್ನಗಳ ಮೂಲಕ ರಕ್ಷಿಸಿದ ಘಟನೆ ತಾಲೂಕಿನ ನಂದಿ ಗಿರಿಧಾಮ ಪಕ್ಕದ ಬ್ರಹ್ಮಗಿರಿ ಬೆಟ್ಟದಲ್ಲಿ ನಡೆದಿದೆ.
ನಂದಿಗಿರಿಧಾಮಕ್ಕೆ ವಾರಾಂತ್ಯದಲ್ಲಿ ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಕದ ಬ್ರಹ್ಮಗಿರಿ ಬೆಟ್ಟಕ್ಕೆ ಟ್ರೆಕ್ಕಿಂಗ್ ಹೊರಟ್ಟಿದ್ದ ದೆಹಲಿ ಮೂಲದ ಯುವಕ ನಿಶಾಂತ್ ಗುಲ್ಲಾ(19)ಆಯತಪ್ಪಿ ಜಾರಿ ಬಿದ್ದಿದ್ದಾನೆ. ಈತ ಬೆಂಗಳೂರಿನ ಪಿಇಎಸ್ ಯೂನಿವರ್ಸಿಟಿ ಕಾಲೇಜಿನ ವಿದ್ಯಾರ್ಥಿ ಎಂದು ತಿಳಿದುಬಂದಿದೆ.
ಕಡಿದಾದ ಬಂಡೆಯೊಂದರಲ್ಲಿ ಸಿಕಿಕೊಂಡಿದ್ದ ಆತ ಕೆಳಗೆ ಬೆಟ್ಟದಿಂದ ಸುಮಾರು 250 ಅಡಿ ಆಳ ಕೆಳಕ್ಕೆ ಬಿದ್ದಿದ್ದ. ಈ ವೇಳೆ ಅಲ್ಲಿ ಸ್ವಲ್ಪ ಮಟ್ಟಿನ ಆಧಾರ ದೊರೆತಿದೆ. ಈತ ಸಿಲುಕಿದ್ದ ಸ್ಥಳದಿಂದ ಮತ್ತೆ ಕೆಳಗೆ 300 ಅಡಿಗಳ ಕಂದಕವಿತ್ತು. ಕಾರ್ಯಾಚರಣೆ ಕೈಗೊಂಡ ಪೊಲೀಸರು, ಅಗ್ನಿಶಾಮಕ, ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮತ್ತು ಜಿಲ್ಲಾಡಳಿತ ಯುವಕನ ರಕ್ಷಣೆಗೆ ಸತತ ಪ್ರಯತ್ನ ನಡೆಸಿತ್ತು. ಕೊನೆಗೆ ವಾಯುಸೇನೆ ರವಾನಿಸಿದ್ದ ಹೆಲಿಕಾಪ್ಟರ್ ಮೂಲಕ ಯುವಕನನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ.
ನಂದಿಗಿರಿಧಾಮ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಮನೆಯೊಳಗೆ ಒಂದೇ ಕುಟುಂಬದ ನಾಲ್ವರ ಮೃತದೇಹ ಪತ್ತೆ.. ಆತ್ಮಹತ್ಯೆ ಶಂಕೆ