ಚಿಕ್ಕಬಳ್ಳಾಪುರ: ಅಂಗನವಾಡಿ ಕಾರ್ಯಕರ್ತೆಯಾಗಿದ್ದ ವಿಚ್ಛೇದಿತ ಪತ್ನಿಯನ್ನು ಕೊಲೆಗೈದು ಕಳ್ಳತನದ ಸುಳ್ಳು ಕಥೆ ಹೇಳಿದ ಪತಿಯನ್ನು ಚಿಂತಾಮಣಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಜುಲೈ 12ರಂದು ನಾಯನಹಳ್ಳಿ ಗ್ರಾಮದಲ್ಲಿ ವೆಂಕಟಲಕ್ಷ್ಮಮ್ಮ (51) ಭೀಕರವಾಗಿ ಕೊಲೆಯಾಗಿದ್ದರು. ಅನುಮಾನ ಬಾರದಿರಲೆಂದು ಆರೋಪಿ ಅಂಜಪ್ಪ ತನ್ನ ಅಳಿಯನ ಜತೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ, ನನ್ನ ವೆಂಕಟಲಕ್ಷ್ಮಮ್ಮಳನ್ನು ಯಾರೋ ಕೊಲೆ ಮಾಡಿ, ಕತ್ತಲ್ಲಿದ್ದ ಸರ, ಮನೆಯಲ್ಲಿದ್ದ ಒಡವೆ, ಹಣ ದೋಚಿದ್ದಾರೆ ಎಂದು ದೂರು ನೀಡಿದ್ದ.
ಇದನ್ನೂ ಓದಿ: ರಾಯಚೂರಲ್ಲಿ ಹರಿದ ನೆತ್ತರು.. ಹಾಡಹಗಲೇ ಗುತ್ತಿಗೆದಾರನ ಬರ್ಬರ ಕೊಲೆ
ಪೊಲೀಸರು ಆರೋಪಿಗೆ ತನಿಖೆ ನಡೆಸುತ್ತಿದ್ದಾಗ ಪ್ರಕರಣದ ರೂವಾರಿ ಅಂಜಪ್ಪ ಎನ್ನುವುದು ಗೊತ್ತಾಗಿದೆ. ಕತ್ರಿಗುಪ್ಪೆ ಗ್ರಾಮದ ಈತ ನಾಯನಹಳ್ಳಿ ಗ್ರಾಮದ ವೆಂಕಟಲಕ್ಷ್ಮಮ್ಮಳನ್ನು ಈ ಹಿಂದೆ ಮದುವೆಯಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ ಬಳಿಕ ಆಕೆಗೆ ವಿಚ್ಛೇದನ ನೀಡಿ ಬೇರೊಂದು ಮದುವೆಯಾಗಿದ್ದ.
ವೆಂಕಟಲಕ್ಷ್ಮಮ್ಮ ತನ್ನ ಹೆಸರಿನಲ್ಲಿದ್ದ 26 ಗುಂಟೆ ಜಮೀನನ್ನು ಅಂಜಪ್ಪನ ಮಧ್ಯಸ್ಥಿಕೆಯಲ್ಲೇ ವ್ಯಕ್ತಿಯೊಬ್ಬರಿಗೆ 40 ಲಕ್ಷ ರೂ.ಗೆ ಆಗ್ರಿಮೆಂಟ್ ಮಾಡಿಕೊಟ್ಟಿದ್ದಳು. ಆದರೆ ವರ್ಷಗಳೇ ಕಳೆದರೂ ರಿಜಿಸ್ಟ್ರರ್ ಆಗದ ಕಾರಣ ಅದೇ ಜಮೀನನ್ನು ವೆಂಕಟಲಕ್ಷ್ಮಮ್ಮ ಬೇರೊಬ್ಬರಿಗೆ 60 ಲಕ್ಷ ರೂ.ಗೆ ಮಾರಾಟ ಮಾಡಲು ಮುಂದಾಗಿದ್ದರು. ಇದರಿಂದ ಇಬ್ಬರ ಮಡುವೆ ಮನಸ್ತಾಪ ಉಂಟಾಗಿ ಆರೋಪಿ ಆಕೆಯನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.