ಗುಂಡ್ಲುಪೇಟೆ: ಕೊರೊನಾ ಸೋಂಕಿನ ಬಗ್ಗೆ ಗುಂಡ್ಲುಪೇಟೆ ತಾಲೂಕಿನ ದೊಡ್ಡತೂಪ್ಪುರು ಗ್ರಾಮದಲ್ಲಿ ಯುವಕರು ಅರಿವು ಮೂಡಿಸಿ, ಸೋಂಕಿನ ವಿರುದ್ಧ ಹೋರಾಡುವ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಗ್ರಾಮದ ಮರವೊಂದಕ್ಕೆ ನಿಂಬೆಹಣ್ಣು, ಮೆಣಸಿನಕಾಯಿ ಸೇರಿಸಿ ಮಾಡುವ ತಾಯತ ಆಕಾರವೊಂದನ್ನು ಕಟ್ಟಿ ದಿಗ್ಬಂಧನ ರೀತಿಯಲ್ಲಿ ಮಾಡಿದ್ದಾರೆ. ಈ ಕೊರೊನಾ ನಮ್ಮ ಊರಿಗೆ ಬರಬಹುದು, ಅದಕ್ಕೆ ತಕ್ಕ ಕ್ರಮಗಳನ್ನು ಅನುಸರಿಸಬೇಕು ಎಂಬುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಯುವಕ ಗೌತಮ್ ಮೌರ್ಯ, ಜನರು ಈ ಸೋಂಕಿಗೆ ಹೆದರಬಾರದು, ಸ್ವಚ್ಛವಾಗಿ ಮನೆಯಲ್ಲಿ ಇದ್ದು ಹೊರಗೆ ಬಾರದೆ ಇದ್ದರೆ ಅದೇ ಈ ವೈರಸ್ಗೆ ಮದ್ದು ಎಂದು ತಿಳಿಸಿದರು.
'ಕೇಳಿ ಓ ಊರಿನ ಬಾಂಧವರೇ ಮನೆಯಲ್ಲಿ ಇದ್ದು ಬಿಡಿ ಹೊರಗೆ ಹೋಗದಿರಿ' ಎಂಬ ಬರಹದ ಮೂಲಕ ಜನರಿಗೆ ಅರಿವು ಮೂಡಿಸುತ್ತಿದ್ದಾರೆ. ಆಶಾ ಕಾರ್ಯಕರ್ತೆಯರು ಮುಂಜಾಗ್ರತಾ ಕ್ರಮಗಳನ್ನು ತಿಳಿಸಿದರು.