ಚಾಮರಾಜನಗರ : ಸಾಹಿತ್ಯ ವಲಯ ಹಾಗೂ ಶಿಕ್ಷಕ ವೃತ್ತಿಯಲ್ಲಿ ಮಹಾದೇವ ಶಂಕರಪುರಗೆ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.
ಇತಿಹಾಸ ವಿಷಯದಲ್ಲಿ ಎಂ.ಫಿಲ್ ಪದವೀಧರರಾಗಿರುವ ಎಸ್. ಮಹಾದೇವ ಅವರು ಉಪನ್ಯಾಸಕರಾಗಿ, ಸಂಸ್ಕೃತಿ ಸಂಶೋಧಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜಿಲ್ಲೆಯ ಜನಪದ, ಇತಿಹಾಸದ ಬಗ್ಗೆ ಅಪರೂಪದ ಹೊತ್ತಿಗೆಗಳನ್ನು ಹೊರ ತಂದಿದ್ದಾರೆ.
ಇವರ 'ಮಾರಿ ಹಬ್ಬಗಳು' ಎಂಬ ಕೃತಿಯು ಸಾಹಿತ್ಯ ವಲಯದಲ್ಲಿ ಭಾರಿ ಸದ್ದು ಮಾಡಿತ್ತು. ಈ ಕೃತಿಗೆ ಯಕ್ಷಗಾನ ಅಕಾಡೆಮಿ, ಜನಪದ ಅಕಾಡೆಮಿ ಮತ್ತು ಮೈಸೂರು ವಿವಿಯ ತೀನಂಶ್ರೀ ಪ್ರಶಸ್ತಿಗಳು ಬಂದಿವೆ.
ಮಂಟೇಸ್ವಾಮಿ ಮೂವ್‌ಮೆಂಟ್- ಚಿಕ್ಕಲ್ಲೂರು ಜಾತ್ರೆ ಎಂಬ ಕೃತಿಯು ಜನಮನ ಗೆದ್ದಿತು. ಜಿಲ್ಲೆಯಲ್ಲಿನ 286 ಮಂದಿ ಜನಪದ ಕಲಾವಿದರನ್ನು ಗುರುತಿಸಿ ಗೌರವಿಸಿದ್ದು ಇವರ ಗಮನಾರ್ಹ ಸಾಧನೆ.
ಪುನೀತ್ ಸಾವಿನಿಂದ ಸಂಭ್ರಮವಿಲ್ಲ : ಪ್ರಶಸ್ತಿ ಬಂದಿರುವುದು ಖುಷಿಯ ವಿಚಾರವಾದರೂ ಪುನೀತ್ ದಿಢೀರ್ ಅಗಲಿಕೆಯಿಂದ ಸಂಭ್ರಮಿಸಲಾಗುತ್ತಿಲ್ಲ.
ಜನರೆ ಗುರುತಿಸಿ ಪ್ರಶಸ್ತಿ ನೀಡಿದ್ದು ಸಂತಸದ ವಿಚಾರ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಂಕರಪುರ ಮಹಾದೇವ ಹೇಳಿದರು. ಇನ್ನು ತಮಗೆ ಬಂದಿರುವ ಪ್ರಶಸ್ತಿಯನ್ನು ಮಹಾಕಾವ್ಯ ಕಟ್ಟಿ ಬೆಳೆಸಿದ ಜನಪದ ಗಾಯಕರಿಗೆ, ಮೌಖಿಕ ಪರಂಪರೆಯ ವಕ್ತಾರರಿಗೆ ಅರ್ಪಿಸುವುದಾಗಿ ತಿಳಿಸಿದರು.