ಗುಂಡ್ಲುಪೇಟೆ: ಪಟ್ಟಣದ ಚೆಸ್ಕಾಂನಲ್ಲಿ ಕರ್ತವ್ಯ ನಿರ್ವಹಣೆಯ ಮಾಡುತ್ತಿದ್ದ ನೌಕರರ ಮೇಲೆ ಇಲಾಖೆಯ ಇನ್ನೊಂದು ಗುಂಪು ಮಾರಣಾಂತಿಕ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದೆ. ಇದರ ವಿರುದ್ಧ ಪಟ್ಟಣ ಪೋಲಿಸ್ ಠಾಣೆಗೆ ದೂರು ನೀಡಿ 15 ದಿನ ಕಳೆದಿದ್ದರೂ ಹಲ್ಲೆ ನಡೆಸಿದ ಆರೋಪಿಗಳನ್ನು ಪೊಲೀಸರು ಬಂಧಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹಲ್ಲೆಗೊಳಗಾದ ನೌಕರರ ಪತ್ನಿ ಎನ್. ಶೈಲಾ ಆರೋಪಿಸಿದರು.
ಪಟ್ಟಣದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಟ್ಟಣದ ಚೆಸ್ಕಾಂ ಕಚೇರಿ ಆವರಣದಲ್ಲಿ ಇಲಾಖೆ ನೌಕರರ ಅಧ್ಯಕ್ಷರ ಆಯ್ಕೆ ಚುನಾವಣೆ ಸಂದರ್ಭದಲ್ಲಿ ನಡೆದ ಗಲಾಟೆಯಲ್ಲಿ ನನ್ನ ಪತಿ ವೆಂಕಟೇಶ ಎಂಬುವವರ ಮೇಲೆ ಎದುರಾಳಿ ಗುಂಪಿನ ನೌಕರರು ಮಾರಣಾಂತಿಕ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ದೂರು ನೀಡಿದರೂ ಕೂಡ ಅದನ್ನು ಪೊಲೀಸರು ತಿರುಚಿ ಬರೆಸಿಕೊಂಡಿದ್ದಾರೆ ಎಂದು ದೂರಿದರು.
ಹಲ್ಲೆ ನಡೆಸಿದ ಅರೋಪಿಗಳು ರಾಜಾರೋಷವಾಗಿ ಓಡಾಡುತ್ತಿದ್ದರು ಸಹ ಪಟ್ಟಣ ಪೊಲೀಸರು ಅವರನ್ನು ಬಂಧಿಸದೇ ಅನ್ಯಾಯ ಮಾಡುತ್ತಿದ್ದಾರೆ. ಜೊತೆಗೆ ಇವರಿಗೆ ತಾಲೂಕಿನ ರಾಜಕೀಯ ವ್ಯಕ್ತಿಗಳು ಸಹಕಾರ ನೀಡುತ್ತಿದ್ದಾರೆ. ಎಸ್ಸಿ, ಎಸ್ಟಿ ದೌರ್ಜನ್ಯ ಕಾಯಿದೆ ಅಡಿಯಲ್ಲಿ ದೂರು ದಾಖಲಾದರೇ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಬೇಕು. ಆದರೆ ಪೊಲೀಸರು ಪೂರ್ಣ ಪ್ರಮಾಣದಲ್ಲಿ ಇದನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.
ಈ ಕೂಡಲೇ ಅರೋಪಿಗಳನ್ನು ಬಂಧಿಸದೇ ಇದ್ದರೆ ಮಾನವ ಹಕ್ಕುಗಳ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಮಾನವ ಹಕ್ಕುಗಳ ಸಮಿತಿ ಜಿಲ್ಲಾಧ್ಯಕ್ಷ ನಾಗೇಂದ್ರ ಇತರರು ಇದ್ದರು.