ಚಾಮರಾಜನಗರ: ಜಿಲ್ಲೆಯ ಮುಕುಟ ಮಣಿಯಂತಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ 4 ವಲಯಗಳು ಸುಟ್ಟು ಭಸ್ಮವಾಗಿವೆ. 8 ಸಾವಿರಕ್ಕೂ ಹೆಚ್ಚು ಎಕರೆ ಅರಣ್ಯ ನಾಶವಾಗಲು ಕಾರಣ ಹುಡುಕುತ್ತ ಹೊರಟರೆ ವಿವಿಧ ಆಯಾಮಗಳು ತೆರೆದುಕೊಳ್ಳುತ್ತಿವೆ.
ಕಿಡಿಗೇಡಿಗಳ ಕೃತ್ಯ ಎನ್ನುತ್ತಿದ್ದರೂ, ಬಂಡೀಪುರ ಬೆಂಕಿಯ ಹಿಂದೆ ಪ್ರಾಣಿ-ಮಾನವ ಸಂಘರ್ಷ, ಹಸುಗಳಿಗೆ ಹುಲ್ಲು ಸಿಗಲೆಂಬ ಆಸೆ, ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಇದ್ದಿರಲೂಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಕೃತ್ಯ ದನಗಾಹಿಗಳದ್ದೋ, ಸ್ಮಗ್ಲರ್ಗಳದ್ದೋ:
ಕಾಡಿನಲ್ಲಿ ಬೆಂಕಿ ಬೀಳಲು ಪ್ರಮುಖ ಕಾರಣವೆಂದರೆ ದನಗಳಿಗೆ ಹುಲ್ಲು ಸಿಗಲೆಂಬ ಆಸೆ. ಒಣಗಿದ ರೋಜಾ ಗಿಡಗಳು ಸುಟ್ಟ ಜಾಗದಲ್ಲಿ ಹುಲ್ಲು ಬರುವುದರಿಂದ ದನಗಾಹಿಗಳು ಬೆಂಕಿ ಹಚ್ಚುತ್ತಾರೆ. ಆದರೆ, ಅವರು ಹಚ್ಚುವ ಕಿಡಿ ದೊಡ್ಡ ಮಟ್ಟಿಗಿನ ಕಾಡ್ಗಿಚ್ಚಿಗೆ ಕಾರಣವಾಗಿರಬಹುದು. ಆದರೆ, ಅರಣ್ಯಾಧಿಕಾರಿಗಳು ಹೇಳುವ ಪ್ರಕಾರ ಸ್ಮಗ್ಲರ್ಗಳು ಬೆಂಕಿ ಇಟ್ಟು ತಮ್ಮ ಬೇಳೆ ಬೇಯಿಸಿಕೊಂಡಿದ್ದಾರೆ. ಬೆಲೆ ಬಾಳುವ ಮರಗಳ ಕಳ್ಳಸಾಗಣೆಯಲ್ಲಿ ತೊಡಗಿರುವರದ್ದೇ ಕೆಲಸ ಎಂದು ಆರೋಪಿಸುತ್ತಾರೆ. ಇತ್ತೀಚೆಗೆ ಪ್ರಾಣಿ-ಮಾನವ ಸಂಘರ್ಷ ಹೆಚ್ಚಿರುವುದರಿಂದ ಹುಲಿ- ಆನೆಗಳು ಬಾರದಿರಲಿ ಎಂದು ಕೆಲವರು ಬೆಂಕಿ ಇಟ್ಟಿರಲೂಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ.
ಅಧಿಕಾರಿಗಳೇ ಹೊಣೆ ಎನ್ನುವ ಜನರು:
ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ಇಷ್ಟು ದೊಡ್ಡ ಪ್ರಮಾಣವಾಗಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಜನರು ಥಟ್ಟನೆ ಹೇಳುವ ಮೊದಲ ಕಾರಣ. 1 ಎಕರೆ, 2 ಎಕರೆಗೆ ಬೆಂಕಿ ಹಬ್ಬುವ ಮೊದಲೇ ಅಧಿಕಾರಿಗಳು, ಜವಾಬ್ದಾರಿ ಹೊತ್ತವರು ಕ್ರಮ ಕೈಗೊಳ್ಳಬೇಕಿತ್ತು. ಡಿ ಲೈನ್, ಫೈರ್ ಲೈನ್ಗಳು ಸಮರ್ಪಕವಾಗಿ ಮಾಡಿಲ್ಲವೆಂದು ಆರೋಪಿಸುವ ಕಾಡಂಚಿನ ಸ್ಥಳೀಯರು, ಅರಣ್ಯದ ಬಗ್ಗೆ ಎಲ್ಲರಿಗೂ ಪ್ರೀತಿ ಇದೆ. ಗುಂಡ್ಲುಪೇಟೆ ಸಾಮಾಜಿಕ ಅರಣ್ಯಕ್ಕೆ ಬೆಂಕಿ ಬಿದ್ದಾಗಲಾದರೂ ಎಚ್ಚೆತ್ತು ಅಧಿಕಾರಿಗಳು ನಿಗಾ ಇಟ್ಟಿದ್ದರೆ ಹೀಗಾಗುತ್ತಿರಲಿಲ್ಲ ಎನ್ನುತ್ತಾರೆ.
ಸುಮ್ಮನಾದ ಯುವಕರು:
ಕೆಲವು ಅರಣ್ಯಾಧಿಕಾರಿಗಳು ಸ್ಥಳೀಯರೊಂದಿಗೆ ಉತ್ತಮ ಒಡನಾಟ ಇಲ್ಲದಿರುವುದು, ಈ ಪ್ರಮಾಣದಲ್ಲಿ ಬೆಂಕಿ ಹಬ್ಬಲು ಕಾರಣವಾಗಿದೆ ಎನ್ನಲಾಗ್ತಿದೆ. ಕಾಡಿಗೆ ಬೆಂಕಿ ಬಿದ್ದಾಗ ಫೈರ್ ವಾಚರ್ಗಳು ಹಾಗೂ ಗಿರಿಜನರ ಜೊತೆ ಸರಿಸಮಾನರಾಗಿ ಸ್ಥಳೀಯ ಯುವಕರು ಯಾವುದೇ ಫಲಾಪೇಕ್ಷೆ ಇಲ್ಲದೇ ಬೆಂಕಿ ಆರಿಸಲು ಶ್ರಮ ಪಡುತ್ತಿದ್ದರು. ಆದರೆ, ಕೆಲವು ಅರಣ್ಯಾಧಿಕಾರಿಗಳು ಜನಸ್ನೇಹಿಯಾಗದಿರುವುದು, ಕೆಲವು ಸಲ ಬೆಂಕಿ ಆರಿಸಲು ಬಂದವರನ್ನು ಬಳಸಿಕೊಳ್ಳಲು ನಿರಾಕರಿಸಿದ್ದು, ಈ ಅವಘಡಕ್ಕೆ ಕಾರಣ ಎಂಬುದು ಸ್ಥಳೀಯ ಯುವಕರ ಮಾತಾಗಿದೆ.
ಅಧಿಕಾರಿಗಳ ವಾದ:
ಬೆಂಕಿ ಬೀಳದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಕಾಡಿನ ಮಧ್ಯೆವೇ ಬೆಂಕಿ ಇಡುತ್ತಿದ್ದುದು ಮತ್ತು ಏಕಕಾಲದಲ್ಲಿ ಬೇರೆ ಬೇರೆ ವಲಯಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿತ್ತು. ಬೆಂಕಿ ಆರಿಸಿದ ಜಾಗದಲ್ಲೇ ಬೆಂಕಿ ಹಾಕಿದ್ದು, ರಭಸದಿಂದ ಬೀಸುತ್ತಿದ್ದ ಗಾಳಿ ಕಾಡಿಗೆ ಹಬ್ಬಲು ಕಾರಣವಾಯಿತು ಎನ್ನುತ್ತಾರೆ ಅಧಿಕಾರಿಗಳು. ಫೈರ್ ಲೈನ್ಗಳು, ಅಗ್ನಿಶಾಮಕ ವಾಹನಗಳು ಇದ್ದರೂ ಕೂಡ ಕಾಡಿನೊಳಗೆ ಬೆಂಕಿ ಕಾಣಿಸಿದ್ದರಿಂದ ಅಸಹಾಯಕ ಸ್ಥಿತಿ ನಿರ್ಮಾಣವಾಯಿತು. ಪ್ರಾರಂಭದಲ್ಲಿ ಗಿರಿಜನರನ್ನು ಬೆಂಕಿ ಆರಿಸಲು ಹೆಚ್ಚು ಬಳಸಿಕೊಳ್ಳದಿರುವುದು, ಲಂಟನಾ ಹೆಚ್ಚಿದ್ದುದು ಇಷ್ಟೆಲ್ಲಾ ಅನಾಹುತಕ್ಕೆ ಕಾರಣ ಎಂಬುದು ಹೆಸರು ಹೇಳಲಿಚ್ಛಿಸದ ಅಧಿಕಾರಿ ಮಾತು.
ಇನ್ನು, ಜನಪ್ರತಿನಿಧಿಗಳ ನಿರ್ಲಕ್ಷ್ಯ ಢಾಳಾಗಿ ಕಾಣಿಸುವುದಂತೂ ಸುಳ್ಳಲ್ಲ. ಕಾಲ ಕಾಲಕ್ಕೆ ಸಭೆ ನಡೆಸಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಿತ್ತು. ಬೆಂಕಿಯಿಂದ ಬಂಡೀಪುರ ಭಸ್ಮವಾದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಸಿ ಪುಟ್ಟರಂಗಶೆಟ್ಟಿ ಭೇಟಿ ನೀಡಿದ್ದು, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೊಂದು ಉದಾಹರಣೆ.
ಬೆಂಕಿ ಇಟ್ಟಿದ್ದಾರೆಂದು ಅರಣ್ಯ ಇಲಾಖೆ ಮೂರು ಮಂದಿಯ ವಿರುದ್ಧ ಶಂಕೆ ವ್ಯಕ್ತಪಡಿಸಿದ್ದು, ಎಲ್ಲರೂ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಇವರ ವಿರುದ್ಧ ಯಾವುದೇ ಪ್ರಕರಣ ಕೂಡಾ ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.