ಚಾಮರಾಜನಗರ: ಸಂಕ್ರಾಂತಿ ಹಬ್ಬದ ಪ್ರಯುಕ್ತ ನಡೆಯಲಿರುವ ಬಿಳಿಗಿರಿರಂಗನಾಥಸ್ವಾಮಿ ರಥೋತ್ಸವ ಹಾಗೂ ಚಿಕ್ಕ ಜಾತ್ರಾ ಸಂಬಂಧ, ಬಿಳಿಗಿರಿರಂಗನಬೆಟ್ಟಕ್ಕೆ ಜ.15 ಮತ್ತು 16ರಂದು ಯಳಂದೂರು ತಾಲೂಕಿನ ಗುಂಬಳ್ಳಿ ಮತ್ತು ಚಾಮರಾಜನಗರ ತಾಲೂಕಿನ ಹೊಂಡರಬಾಳು ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಮೂಲಕ ದ್ವಿಚಕ್ರ ವಾಹನಗಳಲ್ಲಿ ತೆರಳುವುದನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.
ಜಾತ್ರೆಯಲ್ಲಿ ಜಿಲ್ಲೆ, ಹೊರ ಜಿಲ್ಲೆಗಳಿಂದ ಲಕ್ಷಕ್ಕೂ ಅಧಿಕ ಭಕ್ತಾದಿಗಳು ಸೇರುವ ಸಂಭವವಿದ್ದು, ವಾಹನ ದಟ್ಟಣೆ ಹೆಚ್ಚಾಗಿ ಸಾರ್ವಜನಿಕ ಸಾರಿಗೆ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಬೆಟ್ಟದ ರಸ್ತೆ ಅರಣ್ಯ ಪ್ರದೇಶದಿಂದ ಕೂಡಿದ್ದು, ತುಂಬಾ ಕಡಿದಾದ ಹಾಗೂ ಕಿರಿದಾಗಿರುವುದರಿಂದ ರಸ್ತೆ ಸಂಚಾರದಲ್ಲಿ ದಟ್ಟಣೆಯಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆಯೂ ಇದೆ. ಹೀಗಾಗಿ ಕರ್ನಾಟಕ ಮೋಟಾರು ವಾಹನಗಳ ಕಾಯಿದೆ, ನಿಯಮಾವಳಿ ಹಾಗೂ ಸಂಚಾರಿ ನಿಯಂತ್ರಣ ಕಾಯಿದೆ ಅನ್ವಯ ಎರಡು ದಿನಗಳ ಕಾಲ ಬೆಟ್ಟಕ್ಕೆ ದ್ವಿಚಕ್ರ ವಾಹನಗಳಲ್ಲಿ ತೆರಳುವುದನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಆದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಮೈಸೂರಿಗೆ ಸ್ವಚ್ಛ ನಗರಿ ಪಟ್ಟ ಕೈ ತಪ್ಪಿದ್ದು ಏಕೆ..?: ಜಿಲ್ಲಾಧಿಕಾರಿ ಹೇಳಿದ್ದೇನು?
ದತ್ತಿ ಇಲಾಖೆಯಿಂದ ಸಬ್ಸಿಡಿ ಸೌಲಭ್ಯದಲ್ಲಿ ಭಾರತ್ ಗೌರವ್ ದಕ್ಷಿಣ ಯಾತ್ರಾ ಭಾಗ್ಯ: ಧಾರ್ಮಿಕ ದತ್ತಿ ಇಲಾಖೆಯಿಂದ ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರಾ ಯೋಜನೆ ಆರಂಭಿಸಿದ್ದು, ಆರು ದಿನಗಳ ಯಾತ್ರೆಗೆ ಸರ್ಕಾರದಿಂದ ಸಹಾಯಧನ ನೀಡಲಾಗುತ್ತಿದೆ. ಕೇವಲ 10 ಸಾವಿರ ರೂ.ಗಳಿಗೆ ಊಟ, ವಸತಿಯೊಂದಿಗೆ ರಾಮೇಶ್ವರ, ಕನ್ಯಾಕುಮಾರಿ, ಮದುರೈ, ತಿರುವನಂತಪುರಂ ಪ್ರವಾಸ ಮಾಡಬಹುದಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ರಾಮೇಶ್ವರದ ರಾಮೇಶ್ವರ ದೇವಾಲಯ, ಕನ್ಯಾಕುಮಾರಿಯ ಭಗವತಿ ದೇವಾಲಯ, ಮದುರೈನ ಮೀನಾಕ್ಷಿ ದೇವಾಲಯ, ತಿರುವನಂತಪುರಂನ ಅನಂತಪದ್ಮನಾಭ ಸ್ವಾಮಿ ದೇವಾಲಯಗಳ ದರ್ಶನವನ್ನು ಒಳಗೊಂಡ ಯಾತ್ರೆಯನ್ನು ಧಾರ್ಮಿಕ ದತ್ತಿ ಇಲಾಖೆ ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರಾ ಹೆಸರಿನಲ್ಲಿ ಪರಿಚಯಿಸಿದೆ.
ಒಟ್ಟು 6 ದಿನಗಳ ಯಾತ್ರೆ ಇದಾಗಿದ್ದು, 3 ಟೈರ್ ಎಸಿ ರೈಲು ಪ್ರಯಾಣ, ತಿಂಡಿ, ಊಟ, ವಸತಿ ಮತ್ತು ದರ್ಶನ ವ್ಯವಸ್ಥೆಯನ್ನು ಒಳಗೊಂಡಿದೆ. ಯಾತ್ರಾರ್ಥಿಗಳ ಆರೋಗ್ಯ ಹಾಗೂ ಕ್ಷೇಮಕ್ಕಾಗಿ ವೈದ್ಯಕೀಯ ವ್ಯವಸ್ಥೆಯನ್ನೂ ಒದಗಿಸಿದೆ. ಬೆಂಗಳೂರಿನ ಯಶವಂತಪುರ, ತುಮಕೂರು, ಬೀರೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ ಮತ್ತು ಬೆಳಗಾವಿ ನಿಲ್ದಾಣಗಳಲ್ಲಿ ಯಾತ್ರಾರ್ಥಿಗಳು ರೈಲು ಹತ್ತುವ ಹಾಗೂ ಇಳಿಯುವ ವ್ಯವಸ್ಥೆ ಕಲ್ಪಿಸಲಾಗಿದೆ. ಮೊದಲ ರೈಲು ಜನವರಿ 18 ರಂದು ಹೊರಡಲಿದ್ದು, ಜನವರಿ 23ಕ್ಕೆ ವಾಪಸ್ ಆಗಲಿದೆ.