ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪವಿಭಾಗದ ನುಗು ವನ್ಯಜೀವಿ ವಲಯದಲ್ಲಿ ಭಾನುವಾರ ಮಧ್ಯಾಹ್ನ ಮೂರು ಹುಲಿ ಮರಿ ಕಂಡು ಬಂದಿದ್ದು, ಅದರಲ್ಲಿ ಒಂದು ಸ್ಥಳದಲ್ಲಿಯೇ ಮೃತಪಟ್ಟಿದೆ. ಮತ್ತೊಂದು ಚಿಕಿತ್ಸೆಗೆ ಸ್ಪಂದಿಸದೇ ಮೈಸೂರು ಮೃಗಾಲಯದಲ್ಲಿ ಮೃತಪಟ್ಟಿದೆ.
ಎರಡು ಮರಿಗಳು ಶೋಚನೀಯ ಸ್ಥಿತಿಯಲ್ಲಿ ಇರುವುದನ್ನು ಸಿಬ್ಬಂದಿ ಗಮನಿಸಿ ಹಿರಿಯ ಅರಣ್ಯಾಧಿಕಾರಿಗಳ ಗಮನಕ್ಕೆ ತಂದು ಮರಿಗಳ ಆರೈಕೆ ಮತ್ತು ಚಿಕಿತ್ಸೆಗೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಕಳುಹಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೇ ಹೆಣ್ಣು ಮರಿ ಸಹ ಮೃತಪಟ್ಟಿದೆ. ಬದುಕುಳಿದ ಗಂಡು ಹುಲಿ ಮರಿಯ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ ಎಂದು ಸಹಾಯಕ ವಲಯಾರಣ್ಯಾಧಿಕಾರಿ ಕೆ.ಪರಮೇಶ್ ತಿಳಿಸಿದ್ದಾರೆ.
ಮೃತ ಪಟ್ಟ ಹುಲಿ ಮರಿ ಶವಪರೀಕ್ಷೆ ನಡೆಸಿ ಹಸಿವಿನಿಂದ ಮೃತಪಟ್ಟಿದೆ ಎಂದು ಸಮಿತಿಯ ಸದಸ್ಯರಿಗೆ ತಿಳಿಸಲಾಯಿತು. ಹುಲಿ ಮರಿಗಳು ಪತ್ತೆಯಾದ ಸ್ಥಳದಲ್ಲಿ ಕೂಂಬಿಂಗ್ ನಡೆಸಿ ತಾಯಿ ಹುಲಿಯ ಹೆಜ್ಜೆ ಗುರುತು ಪತ್ತೆ ಮಾಡಲಾಗಿದೆ. ತಾಯಿ ಹುಲಿಯ ಪತ್ತೆಗೆ ಶೋಧ ಕಾರ್ಯ ಪ್ರಗತಿಯಲ್ಲಿದೆ. ಇದಕ್ಕಾಗಿ ಕ್ಯಾಮರಾ ಅಳವಡಿಸಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ಹುಲಿ ಯೋಜನೆ ನಿರ್ದೇಶಕ ಎಸ್.ಆರ್.ನಟೇಶ್ ತಿಳಿಸಿದ್ದಾರೆ.
ಇದನ್ನೂ ಓದಿ:ಮತ್ತೊಮ್ಮೆ ತಮ್ಮದೇ ದಾಖಲೆ ಮುರಿದ 'ಕಂಬಳ ವೀರ' ಶ್ರೀನಿವಾಸ ಗೌಡ