ಚಾಮರಾಜನಗರ/ಮೈಸೂರು: ಎರಡು ಹುಲಿ ಸಂರಕ್ಷಿತ ಪ್ರದೇಶಗಳು, ಎರಡು ವನ್ಯಜೀವಿ ಧಾಮಗಳಲ್ಲಿ ಹುಲಿ ಗಣತಿ, ಆನೆ, ಕಾಡೆಮ್ಮೆ ಗಣತಿ ನಡೆಯಲಿದೆ. ಅರಣ್ಯ ಇಲಾಖೆಯ ನೂರಾರು ಸಿಬ್ಬಂದಿ ಪ್ರಾಣಿಗಳ ಸಂಖ್ಯೆ ಲೆಕ್ಕ ಹಾಕಲು ಸಿದ್ಧರಾಗಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇಂದಿನಿಂದ, ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇದೇ 27ರಿಂದ, ಮಲೆ ಮಹದೇಶ್ವರ ವನ್ಯಜೀವಿ ಧಾಮ ಹಾಗೂ ಕಾವೇರಿ ವನ್ಯಜೀವಿ ಧಾಮಗಳಲ್ಲಿ ಈ ತಿಂಗಳಾಂತ್ಯ ಇಲ್ಲವೇ ಫೆಬ್ರವರಿ ಆರಂಭದಲ್ಲಿ ಹುಲಿ ಗಣತಿ ಕಾರ್ಯ ನಡೆಯಲಿದೆ. 2018ರ ಹುಲಿ ಗಣತಿ ಪ್ರಕಾರ, ಬಂಡೀಪುರದಲ್ಲಿ 173 ಹುಲಿಗಳಿವೆ.
ನಾಗರಹೊಳೆಯಲ್ಲಿ ಗಣತಿ: ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ವ್ಯಾಪ್ತಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿರ್ದೇಶನದಂತೆ 5ನೇ ಅಖಿಲ ಭಾರತೀಯ ಹುಲಿ ಗಣತಿ ಕಾರ್ಯವನ್ನು ನಾಳೆಯಿಂದ ಪ್ರಾರಂಭ ಮಾಡಲಾಗುತ್ತಿದೆ ಎಂದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಡಿ.ಮಹೇಶ್ ತಿಳಿಸಿದ್ದಾರೆ.
ನಾಗರಹೊಳೆಯಲ್ಲಿ ಹುಲಿ ಗಣತಿ ಕಾರ್ಯವು 14 ದಿನಗಳು ನಡೆಯಲಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ 300 ಸಿಬ್ಬಂದಿ ಭಾಗವಹಿಸಲಿದ್ದಾರೆ. ಮೊದಲ ಹಂತದಲ್ಲಿ 3೦೦ ಸಿಬ್ಬಂದಿ 52 ತಂಡಗಳಾಗಿ ಗಣತಿ ಕಾರ್ಯ ನಡೆಸಲಿದ್ದು, ಎರಡನೇ ಹಂತದಲ್ಲಿ 49 ತಂಡಗಳು ಕಾರ್ಯಾಚರಣೆ ನಡೆಸಲಿವೆ ಎಂದು ಮಾಹಿತಿ ನೀಡಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಹುಲಿ ಗಣತಿಯನ್ನು ಮೊದಲ ಬಾರಿಗೆ 'ಎಂ ಸ್ಟ್ರೈಪ್ಸ್' ಎಂಬ ಮೊಬೈಲ್ ಅಪ್ಲಿಕೇಶನ್ ಬಳಸಿ ಹುಲಿಗಳ ಸಮಗ್ರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಮೊದಲು ಹುಲಿ ಗಣತಿಯಲ್ಲಿ ಭಾಗವಹಿಸುವ ಅಧಿಕಾರಿಗಳಿಗೆ ಎಂ ಸ್ಟ್ರೈಪ್ಸ್ ಆ್ಯಪ್ ಬಳಕೆ ಕುರಿತು ತರಬೇತಿಯನ್ನು ನೀಡಲಾಗುತ್ತದೆ. ನಂತರ ಮೊಬೈಲ್ ಮೂಲಕ ಹೊಸ ಆ್ಯಪ್ ಬಳಸಿ ಹುಲಿ ಗಣತಿ ನಡೆಸಲಾಗುತ್ತಿದ್ದು, ಗಣತಿ ಸಮಯದಲ್ಲಿ ಕಂಡು ಬರುವ ಪ್ರತಿ ಹುಲಿ ಹಾಗೂ ಇತರೆ ಪ್ರಾಣಿಗಳ ಸಮಗ್ರ ವಿವರಗಳನ್ನ ಸಿಬ್ಬಂದಿ ಕಲೆ ಹಾಕುತ್ತಾರೆ. ನಂತರ ಈ ಮಾಹಿತಿಯನ್ನು ಕೇಂದ್ರ ಕಚೇರಿಗೆ ಕಳುಹಿಸಲಾಗುತ್ತದೆ.
ಗಣತಿಯ ಮೊದಲನೇಯ ಹಂತದಲ್ಲಿ ಮಾಂಸಾಹಾರಿ, ದೊಡ್ಡ ಸಸ್ಯಹಾರಿ ಪ್ರಾಣಿಗಳ ಗಣತಿ, ಕಾಡಿನಲ್ಲಿ ಮನುಷ್ಯನ ಹಸ್ತಕ್ಷೇಪ, ಸಸ್ಯ ಸಂಪತ್ತು ಸೇರಿ ಇತರ ಮಾಹಿತಿಗಳನ್ನು ಕಲೆ ಹಾಕಲಾಗುವುದು. ಎರಡನೇ ಹಂತದಲ್ಲಿ ಪ್ರಾಣಿಗಳ ಲದ್ದಿ ಸಂಗ್ರಹಿಸಿ ಅಧ್ಯಯನಕ್ಕೆ ಕಳಿಸಿ ಪ್ರಾಣಿಗಳ ಸಾಂದ್ರತೆ ಮತ್ತು ಆಹಾರ ಪದ್ಧತಿ ತಿಳಿಯಲಾಗುತ್ತದೆ ಎಂದು ನಿರ್ದೇಶಕ ಡಿ. ಮಹೇಶ್ ತಿಳಿಸಿದ್ದಾರೆ.
4ವರ್ಷಕ್ಕೊಮ್ಮೆ ಗಣತಿ: ಪ್ರತಿ 4 ವರ್ಷಕ್ಕೊಮ್ಮೆ ರಾಷ್ಟ್ರೀಯ ಹುಲಿ ಗಣತಿಯನ್ನು ನಡೆಸಲಾಗುತ್ತದೆ. ಕೊನೆಯದಾಗಿ ನಾಗರಹೊಳೆಯಲ್ಲಿ 2018ರಲ್ಲಿ ಹುಲಿ ಗಣತಿ ನಡೆಸಲಾಗಿತ್ತು. ಆಗ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ 125 ಹುಲಿಗಳು ಪತ್ತೆಯಾಗಿದ್ದವು. ಇದರಿಂದ ಪ್ರತಿ ನೂರು ಚಕಿಮೀಗೆ 12 ಹುಲಿಗಳು ವಾಸಿಸುತ್ತಿರುವುದು ದೃಢಪಟ್ಟಿತ್ತು. ನಾಗರಹೊಳೆ ಹುಲಿಗಳ ಸಾಂದ್ರತೆಯಲ್ಲಿ ದೇಶದಲ್ಲಿ 3ನೇ ಸ್ಥಾನದಲ್ಲಿ ಇದೆ. ಈ ಬಾರಿ ಹುಲಿಯೊಟ್ಟಿಗೆ ಆನೆ ಮತ್ತು ಕಾಡೆಮ್ಮೆಯನ್ನೂ ಸಿಬ್ಬಂದಿ ಲೆಕ್ಕ ಹಾಕಲಿದ್ದಾರೆ.
ನಾಗರಹೊಳೆಯಲ್ಲಿ ಪ್ರತಿವರ್ಷವೂ ಹುಲಿಗಳ ಗಣತಿ ಮಾಡಲಾಗುತ್ತದೆ. 2019-20ರ ಹುಲಿ ಗಣತಿ ಮಾಡಿದಾಗ 135 ಹುಲಿಗಳು ಹಾಗೂ 29 ಹುಲಿಮರಿ ಇರುವುದನ್ನು ಗುರುತಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಮತ್ತೆ ಕಂಪಿಸಿದ ಭೂಮಿ..