ಚಾಮರಾಜನಗರ: ತೋಟದ ಮನೆಗೆ ಕಳ್ಳತನ ಮಾಡಲು ಬಂದು ಮನೆಮಂದಿ ಹಾಗೂ ಕಳ್ಳರ ನಡುವೆ ಹೊಡೆದಾಟ ನಡೆದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹೊಂಗಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೇರಳ ಮೂಲದ ಪ್ರದೀಪ್ ಎಂಬುವವರು ಹೊಂಗಹಳ್ಳಿ ಗ್ರಾಮದಲ್ಲಿ ಜಮೀನೊಂದನ್ನು ಗುತ್ತಿಗೆ ಪಡೆದು ಅಲ್ಲೇ ಮನೆ ಕಟ್ಟಿಕೊಂಡು ಪತ್ನಿ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದರು. ಆದ್ರೆ, ನಿನ್ನೆ ತಡರಾತ್ರಿ ಕಬ್ಬಿಣದ ರಾಡ್, ಖಾರದಪುಡಿ ಹಿಡಿದು ಬಂದ ಖದೀಮರು ಬಾಗಿಲು ತಟ್ಟುತ್ತಾರೆ. ಬಾಗಿಲು ತೆಗೆದ ಕೂಡಲೇ ಪತಿ-ಪತ್ನಿಗೆ ಖಾರದಪುಡಿ ಎರಚಿ ಮಾಂಗಲ್ಯ ಸರ ಕಿತ್ತು ಪರಾರಿಯಾಗುವಾಗ ಸಿದ್ದು ಎಂಬಾತನನ್ನು ಹಿಡಿದ ಮನೆ ಮಾಲೀಕ ಪ್ರದೀಪ್ ಕೈಗೆ ಸಿಕ್ಕಿದ ಕುರ್ಚಿ, ಪಾತ್ರೆಯಲ್ಲಿ ಹೊಡೆದು ಪೊಲೀಸರಿಗೆ ಮಾಹಿತಿ ನೀಡುತ್ತಾರೆ.
ಗುಂಡ್ಲುಪೇಟೆ ಪಿಎಸ್ಐ ರಾಜೇಂದ್ರ, ಹೆಡ್ ಕಾನ್ಸ್‌ಟೇಬಲ್ ಶಿವನಂಜಪ್ಪ ಮತ್ತಿತರೆ ಸಿಬ್ಬಂದಿ ಆರೋಪಿ ಸಿದ್ದುವನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಪರಾರಿಯಾಗಿದ್ದ ಪ್ರದೀಪ್ ಮತ್ತು ಕುಮಾರ್ನನ್ನು ಸೆರೆ ಹಿಡಿದಿದ್ದಾರೆ.
ಸದ್ಯ, ಮನೆ ಮಾಲೀಕ ಪ್ರದೀಪ್ ಹಾಗೂ ಕಳ್ಳ ಸಿದ್ದು ಇಬ್ಬರೂ ಕೂಡ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.