ಚಾಮರಾಜನಗರ: ಕಾವೇರಿ ಜಲಾನಯನ ಪ್ರದೇಶದಲ್ಲಿ ನದಿ ಜೋಡಣೆ ಕೈಗೊಂಡಿರುವ ತಮಿಳುನಾಡು ಸರ್ಕಾರದ ವಿರುದ್ಧ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಜಿಲ್ಲಾಡಳಿತ ಭವನ ಆವರಣದಲ್ಲಿ ಪ್ರತಿಭಟಿಸಿದರು.
ನೂರಾರು ಕಿ.ಮೀ. ಕಾಲುವೆಯನ್ನು ತಮಿಳುನಾಡು ಸರ್ಕಾರ ಮಾಡುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ಮೊದಲ ಹಂತಕ್ಕೆ ಹಣ ನೀಡಿದೆ. ಇಷ್ಟಾದರೂ ನಮ್ಮ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪಗೆ ಇದಾವುದು ತಿಳಿದಿಲ್ಲ. ಅವರ ಕುರ್ಚಿ ಉಳಿಸಿಕೊಳ್ಳಲು ಗಮನ ನೀಡುತ್ತಿದ್ದಾರೆಯೇ ಹೊರತು ರಾಜ್ಯದ ಹಿತರಕ್ಷಣೆಗಾಗಿ ಕೆಲಸ ಮಾಡುತ್ತಿಲ್ಲ ಎಂದು ವಾಟಾಳ್ ಕಿಡಿಕಾರಿದರು.
ನರೇಂದ್ರ ಮೋದಿ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಹವಣಿಸುತ್ತಿದ್ದಾರೆ. ಭಾರತದ ಪಿಎಂ ಬದಲಾಗಿ ತಮಿಳುನಾಡಿನ ಪ್ರಧಾನಿಯಂತೆ ವರ್ತಿಸುತ್ತಿದ್ದಾರೆ. ನಾವು ಮೇಕೆದಾಟು ಯೋಜನೆ ಮಾಡಲು ಮುಂದಾದಾಗ ಅವರು ಸುಪ್ರೀಂ ಕೋರ್ಟ್ಗೆ ಹೋದರು.
ಈಗ ಅವರು ನಮ್ಮ ರಾಜ್ಯಕ್ಕೆ ಅಪಾಯಕಾರಿ ಯೋಜನೆಯಾದ ನದಿ ಜೋಡಣೆಗೆ ಕಾಲುವೆ ನಿರ್ಮಿಸುತ್ತಿದ್ದರೂ ನಮ್ಮ ಸಿಎಂ ಯಾವ ಕ್ರಮಕ್ಕೂ ಮುಂದಾಗಿಲ್ಲ. ಇದೇ 27ರ ಒಳಗಾಗಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾವ್ಯಾಪಿ ಪ್ರತಿಭಟನೆ ನಡೆಸಿ ಕರ್ನಾಟಕ ಬಂದ್ ಮಾಡುತ್ತೇವೆ. ಈ ಕುರಿತು ನಾಳಿದ್ದು ಕನ್ನಡ ಸಂಘಟನೆಗಳ ಒಕ್ಕೂಟದ ಸಭೆ ಕರೆಯಲಾಗಿದೆ ಎಂದು ಅವರು ಎಚ್ಚರಿಕೆ ನೀಡಿದರು. ದಕ್ಕೂ ಮುನ್ನ ತಮಿಳುನಾಡಿನ ಸಿಎಂ ಪಳನಿಸ್ವಾಮಿ, ಪ್ರಧಾನಿ ಮೋದಿ ಹಾಗೂ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಘೋಷಣೆ ಕೂಗಿದರು.