ಕೊಳ್ಳೇಗಾಲ: ನಗರಸಭೆಯ ನೂತನ ಉಪಾಧ್ಯಕ್ಷೆಯಾಗಿ 31ನೇ ವಾರ್ಡ್‌ನ ಸದಸ್ಯೆ ಸುಶೀಲಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಉಪವಿಭಾಗಾಧಿಕಾರಿ ಡಾ.ಗಿರೀಶ್ ದಿಲೀಪ್ ಬದೋಲೆ ಘೋಷಣೆ ಮಾಡಿದರು.
ವಿಪ್ ಉಲಂಘನೆ ಆರೋಪದ ಮೇರೆಗೆ ಅಧ್ಯಕ್ಷೆ ಸೇರಿದಂತೆ ಏಳು ಮಂದಿ ಬಿಎಸ್ಪಿ ಬಂಡಾಯ ಸದಸ್ಯರ ಸದ್ಯಸತ್ವ ಅನರ್ಹಗೊಂಡ ಬೆನ್ನಲ್ಲೇ ಉಪಾಧ್ಯಕ್ಷೆ ಕವಿತಾ ವಿರುದ್ಧ ಅವಿಶ್ವಾಸ ಮಂಡಿಸಲಾಗಿತ್ತು.
ಸಭೆಯಲ್ಲಿ ಕಾಂಗ್ರೆಸ್‌ನ ಹತ್ತು ಮಂದಿ ಸದಸ್ಯರು, ಬಿಎಸ್ಪಿಯ ಇಬ್ಬರು ಮತ್ತು ಪಕ್ಷೇತರ ನಾಲ್ಕು ಸದಸ್ಯರು ಸೇರಿ ಕೈ ಎತ್ತುವ ಮೂಲಕ ಉಪಾಧ್ಯಕ್ಷ ಕವಿತಾ ಅವರನ್ನು ಪದಚ್ಯುತಿಗೊಳಿಸಿದರು.
ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಜಿಲ್ಲಾಧಿಕಾರಿಗಳ ಸೂಚನೆಯಂತೆ ಚುನಾವಣೆ ನಡೆಯಿತು. 31ನೇ ವಾರ್ಡ್‌ನ ಆರ್. ಸುಶೀಲಾ ಅವರು ಮಾತ್ರ ನಾಮಪತ್ರ ಸಲ್ಲಿಸಿದರು.
ಬೆಳಗ್ಗೆ 10 ರಿಂದ 11 ಗಂಟೆವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿತ್ತು. ಇನ್ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆ ಸುಶೀಲಾ ಅವರನ್ನು ನೂತನ ಉಪಾಧ್ಯಕ್ಷೆ ಎಂದು ಚುನಾವಣಾಧಿಕಾರಿಗಳು ಘೋಷಿಸಿದರು.
ಚುನಾವಣೆಯಲ್ಲಿ ಕಾಂಗ್ರೆಸ್‌ನ ಹನ್ನೊಂದು ಸದಸ್ಯರು, ಬಿಎಸ್ಪಿಯ ಇಬ್ಬರು ಮತ್ತು ನಾಲ್ಕು ಮಂದಿ ಪಕ್ಷೇತರರು ಭಾಗವಹಿಸಿದ್ದರು. ಈ ವೇಳೆ ಬಿಜೆಪಿಯ ಏಳು ಮಂದಿ ಸದಸ್ಯರಲ್ಲಿ ಯಾರೂ ಭಾಗವಹಿಸದಿರುವುದು ಚರ್ಚೆಗೆ ಗ್ರಾಸವಾಗಿತ್ತು.