ಚಾಮರಾಜನಗರ : ರಾಜ್ಯದಲ್ಲೇ ಮೊದಲ ಬಾರಿಗೆ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರವೊಂದರಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಗರ್ಭಕೋಶ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಹೊಟ್ಟೆ ಕುಯ್ಯದೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ತಾಲೂಕಿನ ಸಂತೇಮರಹಳ್ಳಿಯ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ಭಾನುವಾರ ನಡೆದ ಶಸ್ತ್ರಚಿಕಿತ್ಸೆ ಕಾರ್ಯಾಗಾರದಲ್ಲಿ ಆರು ಮಂದಿ ಮಹಿಳೆಯರಿಗೆ ಹೊಟ್ಟೆ ಕುಯ್ಯದೆ ಸಾಧನಗಳನ್ನು ಬಳಸಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ವೈದ್ಯರು ಆಪರೇಷನ್ ಮಾಡುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ನೇರಪ್ರಸಾರ ಮಾಡಲಾಗಿದೆ. ವಿದೇಶ, ಹೊರರಾಜ್ಯಗಳ ವೈದ್ಯರು ಸೇರಿದಂತೆ ಸುಮಾರು 200 ಮಂದಿ ಶಸ್ತ್ರಚಿಕಿತ್ಸೆಯನ್ನು ವೀಕ್ಷಿಸಿ ಹಲವು ಸಂದೇಹಗಳನ್ನು ಪರಿಹರಿಸಿಕೊಂಡಿದ್ದಾರೆ.
![Successful Uterine Surgery Without Abdominal Pain](https://etvbharatimages.akamaized.net/etvbharat/prod-images/kn-cnr-04-operation-av-ka10038_23032021205251_2303f_1616512971_425.jpg)
ಏನಿದು ಶಸ್ತ್ರಚಿಕಿತ್ಸೆ?: ಸಾಮಾನ್ಯವಾಗಿ ಸ್ತ್ರೀರೋಗಗಳ ಬಗ್ಗೆ ಮಹಿಳೆಯರು ಹೆಚ್ಚು ನಿರ್ಲಕ್ಷ್ಯ ತೋರುತ್ತಾರೆ. ಬಹುಪಾಲು ಸ್ತ್ರೀಯರಿಗೆ ಹೊಟ್ಟೆ ಕೊಯ್ದು ನಡೆಸುವ ಶಸ್ತ್ರಚಿಕಿತ್ಸೆ ಎಂದರೆ ಭಯ ಪಡುತ್ತಾರೆ. ಆದರೆ, ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾನುವಾರ ನಡೆದ ಶಸ್ತ್ರಚಿಕಿತ್ಸೆ ಮಹಿಳೆಯರಿಗೆ ಈ ಭೀತಿ ಹೋಗಲಾಡಿಸಿದೆ. ಅಲ್ಲದೇ ಗರ್ಭಕೋಶ ಶಸ್ತ್ರ ಚಿಕಿತ್ಸೆ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ನೇರಪ್ರಸಾರವನ್ನೂ ಏರ್ಪಡಿಸಲಾಗಿತ್ತು.
ಗರ್ಭಕೋಶದ ಗಡ್ಡೆ, ಗರ್ಭಕೋಶ ಶಸ್ತ್ರಚಿಕಿತ್ಸೆ ಬಳಿಕ ಸಡಿಲಗೊಂಡ ಚೀಲದಿಂದ ಮೂತ್ರ ಸೋರುವುದು, ಹೆರಿಗೆ ಬಳಿಕ ಕೆಮ್ಮಿದಾಗ, ನಡೆದಾಗ ಮೂತ್ರ ಸೋರುವುದು, ಯೋನಿ ಭಾಗ ಜರುಗಿರುವುದು ಸೇರಿ ಗರ್ಭಕೋಶದ ಇತರ ನ್ಯೂನ್ಯತೆಗಳನ್ನು ಹೊಟ್ಟೆ ಕೊಯ್ಯದೆ, ಲ್ಯಾಪ್ರೋಸ್ಕೋಪಿ ವಿಧಾನ ಬಳಸದೆ ಯೋನಿ ಭಾಗದಿಂದ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
![Successful Uterine Surgery Without Abdominal Pain](https://etvbharatimages.akamaized.net/etvbharat/prod-images/kn-cnr-04-operation-av-ka10038_23032021205251_2303f_1616512971_997.jpg)
ಮೈಸೂರು, ಬೆಂಗಳೂರಿನ ಪ್ರತಿಷ್ಟಿತ ಖಾಸಗಿ ಆಸ್ಪತ್ರೆಗಳಲ್ಲಿ ಈ ರೀತಿಯ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಲು ಅಂದಾಜು 1ರಿಂದ 2 ಲಕ್ಷ ರೂ. ಹಣ ಖರ್ಚಾಗುತ್ತದೆ ಎಂದು ಹೇಳಲಾಗುತ್ತಿದೆ. ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿರುವುದು ಸರ್ಕಾರಿ ಆಸ್ಪತ್ರೆಯ ಸೇವೆ ಬಗ್ಗೆ ಜನರಲ್ಲಿ ಹೆಮ್ಮೆ ಮೂಡಿಸಿದೆ.
ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ಸ್ತ್ರೀರೋಗ ತಜ್ಞೆ ಮತ್ತು ಆಡಳಿತಾಧಿಕಾರಿ ಡಾ. ಸಿ ಎನ್ ರೇಣುಕಾದೇವಿ ಅವರು ಈ ವಿಶೇಷ ಪ್ರಯತ್ನದ ರೂವಾರಿ ಅಷ್ಟೇ ಅಲ್ಲ, ಇದರಲ್ಲಿ ಯಶಸ್ವಿಯೂ ಆಗಿದ್ದಾರೆ.
ಬೆಂಗಳೂರಿನ ಇಎಸ್‌ಐ ಆಸ್ಪತ್ರೆಯ ಪ್ರೊ.ಡಾ.ಚಂದ್ರಶೇಖರ್ ಮೂರ್ತಿ, ಡಾ.ಲಕ್ಷ್ಮಿ, ಡಾ.ಮಧುರ, ಡಾ.ಪ್ರದೀಪ್, ಡಾ.ಶ್ರೀಧರ್, ಡಾ.ಮಹೇಶ್, ಡಾ.ದೇವರಾಜು ಮತ್ತು ಇತರ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದರು.
ಓದಿ:ಡಿಸಿ ಆದ್ರೂ ಕೃಷಿಯತ್ತ ಬಿಡದ ತುಡಿತ.. ಸಾವಯವ ಜಿಲ್ಲಾಧಿಕಾರಿಯಿಂದ ಯುವಕರಿಗೆ ಉತ್ತೇಜನ, ಸ್ಫೂರ್ತಿ!
ಗರ್ಭಕೋಶ ಸಮಸ್ಯೆಗೆ ಬೇರೆ ವಿಧಾನದಲ್ಲಿ ಶಸ್ತ್ರಚಿಕಿತ್ಸೆ ಮಾಡಿಕೊಡುವ ಬಗ್ಗೆ ವೈದ್ಯೆ ಡಾ. ಸಿ ಎನ್ ರೇಣುಕಾದೇವಿ ಮತ್ತು ತಂಡ ಕಳೆದ 1 ತಿಂಗಳಿನಿಂದ ಆಶಾ, ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸಭೆ ನಡೆಸಿ ಅರಿವು ಮೂಡಿಸಿದ್ದರು.
ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗಿ 15 ಮಂದಿ ಸ್ತ್ರೀಯರು ಚಿಕಿತ್ಸೆ ಪಡೆಯಲು ಮುಂದೆ ಬಂದಿದ್ದರು. ಇವರಲ್ಲಿ ಪ್ರಥಮವಾಗಿ ಆರು ಮಂದಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಉಳಿದವರಿಗೆ ಮುಂದಿನ ವಾರ ಶಸ್ತ್ರಚಿಕಿತ್ಸೆ ನಡೆಯಲಿದೆ.
ಮೊದಲ ಕಾರ್ಯಾಗಾರ : ಕರ್ನಾಟಕ ಆಕ್ಸ್ಟ್ರೆಟಿಕ್ ಅಂಡ್ ಗೈನೊಕಾಲಜಿ ಸೊಸೈಟಿ ಸಹಕಾರದೊಂದಿಗೆ ನಡೆದ ಶಸ್ತ್ರಚಿಕಿತ್ಸೆ ನೇರ ಪ್ರಸಾರ ವೈದ್ಯರಿಗೆ ಕಾರ್ಯಾಗಾರವೂ ಆಗಿತ್ತು. ಸೊಸೈಟಿಯಿಂದ ಈ ಪ್ರಯತ್ನವೂ ರಾಜ್ಯದಲ್ಲೇ ಇದೇ ಮೊದಲು ಎಂದು ತಿಳಿದು ಬಂದಿದೆ.
ಸೊಸೈಟಿಯ ಅಧ್ಯಕ್ಷ ಡಾ.ಬಸವರಾಜ ಸಜ್ಜನ್ ಅವರೊಂದಿಗೆ ಚರ್ಚೆ ನಡೆಸಿ, ಡಾ.ಚಂದ್ರಶೇಖರ್ ಮೂರ್ತಿ ಆಸ್ಪತ್ರೆಗೆ ಬಂದು ಜನರೊಂದಿಗೆ ಮಾತನಾಡಿದ್ದರು. ಹೀಗೆ ವಿವಿಧ ಹಂತಗಳಲ್ಲಿ ಕಳೆದ ಎರಡು ತಿಂಗಳಿನಿಂದ ತಯಾರಿ ನಡೆಸಿ ಶಸ್ತ್ರಚಿಕಿತ್ಸೆ ನೇರ ಪ್ರಸಾರ ಕಾರ್ಯಾಗಾರ ನಡೆಸಲಾಯಿತು.