ಚಾಮರಾಜನಗರ: ಶೃಂಗೇರಿ ಶಾರದಾಪೀಠದ 81ನೇ ಶಾಖಾ ಮಠವಾದ ಚಾಮರಾಜನಗರ ತಾಲೂಕಿನ ಹೆಬ್ಬಸೂರು ಗ್ರಾಮದ ಶಂಕರ ಮಠ 3.5 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡಿದ್ದು, ಕಿರಿಯ ಶ್ರೀಗಳನ್ನು ಬರಮಾಡಿಕೊಳ್ಳಲು ಸಕಲ ತಯಾರಿ ನಡೆದಿದೆ.
ಶೃಂಗೇರಿ ಕಿರಿಯ ಶ್ರೀ ವಿದುಶೇಖರ ಭಾರತೀ ತೀರ್ಥರು ವಿಜಯಯಾತ್ರೆ ಕೈಗೊಂಡಿದ್ದು, ಇದೇ 11 ಮತ್ತು 12 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಶಂಕರ ಜಯಂತಿ ದಿನವಾದ ಇಂದಿನಿಂದಲೇ ನಿತ್ಯ 6 ದಿನ ಕಾರ್ಯಕ್ರಮ ಆಯೋಜನೆಗೊಂಡಿದೆ. ಸಾವಿರಾರು ಮಂದಿಗೆ ನಿರಂತರ ಅನ್ನ ಸಂತರ್ಪಣೆ ನಡೆಯಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಮಠದ ಧರ್ಮಾಧಿಕಾರಿ ಶ್ರೀಧರಪ್ರಸಾದ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಕಳೆದ 5 ವರ್ಷಗಳಿಂದ ನಡೆಯುತ್ತಿದ್ದ ನವೀಕರಣ ಕಾರ್ಯ ಮುಕ್ತಾಯಗೊಂಡಿದ್ದು, ಕಿರಿಯ ಶ್ರೀಗಳಿಂದ ದೇವಾಲಯದ ವಿಮಾನ ಗೋಪುರ, ರಾಜಗೋಪುರ, ಚಂದ್ರಮೌಳೇಶ್ಚರ ಪ್ರತಿಷ್ಡೆ ಕಾರ್ಯ ನಡೆಯಲಿದೆ. ತಮಿಳುನಾಡು, ಆಂಧ್ರಪ್ರದೇಶ, ದೆಹಲಿಯಿಂದ ಸಾವಿರಾರು ಮಂದಿ ಭಕ್ತರಗಳು ಆಗಮಿಸಲಿದ್ದಾರೆ.
ಅಂದು ಹಿರಿಯಶ್ರೀ ಮಠದ ಉದ್ಘಾಟನೆ- ಇಂದು ಕಿರಿಯಶ್ರೀ ಕುಂಭಾಭಿಷೇಕ: ಶಾರದಾಪೀಠದ ಹಿರಿಯ ಶ್ರೀ ಭಾರತೀ ತೀರ್ಥರು ಶಂಕರ ಮಠವನ್ನು ಉದ್ಘಾಟಿಸಿದ್ದರು, ಈಗ ಕಿರಿಯ ಶ್ರೀ ರಾಜಗೋಪುರಕ್ಕೆ ಕುಂಭಾಭಿಷೇಕ ನಡೆಸುತ್ತಿದ್ದು ಏಕಾಂಗಿಯಾಗಿ ಮೊದಲ ಬಾರಿಗೆ ಹೆಬ್ಬಸೂರಿಗೆ ಬರುತ್ತಿರುವ ಮೊದಲ ವಿಜಯಯಾತ್ರೆ ಇದಾಗಿದೆ. ಇಂದು ಶಂಕರ ಜಯಂತಿ, 7 ಕ್ಕೆ ಗ್ರಾಮಸ್ಥರಿಗೆ ಅನ್ನಸಂತರ್ಪಣೆ, 8 ಕ್ಕೆ ಶತ ಚಂಡಿಕಾ ಯಾಗ, 9 ರಂದು ಶತಚಂಡಿ ಪುರಶ್ಚರಣೆ, 10 ರಂದು 108 ಸುಮಂಗಲಿಯರು, ಕನ್ನಿಕಾ ಪೂಜೆ, 11 ರಂದು ಶ್ರೀಗಳ ಅನುಗ್ರಹ ಭಾಷಣ, 12 ರಂದು ರಾಜಗೋಪುರ ಕುಂಭಾಭಿಷೇಕ ಕಾರ್ಯಕ್ರಮ ನಡೆಯಲಿದೆ.
ಇದನ್ನೂ ಓದಿ: ಪೊಲೀಸ್ ಇನ್ಸ್ಪೆಕ್ಟರ್ಗೆ ಅವಾಜ್ ಹಾಕಿದ್ರಾ ಮೂಡಿಗೆರೆ ಶಾಸಕ?: ಆಡಿಯೋ ಕೇಳಿ..