ಚಾಮರಾಜನಗರ: ವ್ಯಕ್ತಿಯೊಬ್ಬರು ಪೊಲೀಸ್ ದಾಳಿ ಭೀತಿಯಲ್ಲಿ ಓಡುತ್ತಿದ್ದ ಸಂದರ್ಭದಲ್ಲಿ ಮೃತಪಟ್ಟ ಘಟನೆ ಚಾಮರಾಜನಗರ ತಾಲೂಕಿನ ಕೆಂಪನಪುರದಲ್ಲಿ ಸೋಮವಾರ ನಡೆದಿದೆ. ಮೃತರನ್ನು ಬಸವರಾಜು (62) ಎಂದು ಗುರುತಿಸಲಾಗಿದೆ. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಕೆರೆ ಏರಿ ಸಮೀಪ ಪಾನಗೋಷ್ಠಿ ಮಾಡುತ್ತಿದ್ದಾಗ ಪೊಲೀಸರನ್ನು ಕಂಡು ಅವರು ಹೆದರಿ ಓಡಿದ್ದಾರೆ. ಈ ವೇಳೆ ಹೃದಯಾಘಾತವಾಗಿ ಮೃತಪಟ್ಟರು ಎಂದು ತಿಳಿದುಬಂದಿದೆ.
ಸಂತೋಷಕೂಟ ಮಾಡುವವರನ್ನು ಜೂಜಾಟ ಆಡುತ್ತಿದ್ದಾರೆಂದು ಪೊಲೀಸರು ಓಡಿಸಿಕೊಂಡು ಹೋಗಿದ್ದರಿಂದ ಹೃದಯಾಘಾತದಿಂದ ಬಸವರಾಜು ನಿಧನರಾಗಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಸ್ಥಳಕ್ಕೆ ಸಂತೇಮರಹಳ್ಳಿ ಪಿಐ ಮತ್ತು ಪಿಎಸ್ಐ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊಳ್ಳೇಗಾಲದಲ್ಲಿ ಭೀಕರ ಅಪಘಾತ: ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಅಸುನೀಗಿದ ಘಟನೆ ಕೊಳ್ಳೇಗಾಲದಲ್ಲಿ ನಡೆಯಿತು. ಕೊಳ್ಳೇಗಾಲ ಪಾಳ್ಯ ಗ್ರಾಮದ ಸಂತೋಷ್ (32), ಸೌಮ್ಯ (27) ದಂಪತಿ ಹಾಗೂ ಇವರ ಮಕ್ಕಳಾದ ನಿತ್ಯಸಾಕ್ಷಿ (4), ಅಭಿ (9) ಸಾವನ್ನಪ್ಪಿದ್ದಾರೆ.
ಹಬ್ಬಕ್ಕೆ ಬಟ್ಟೆ ಖರೀದಿಸಲು ಕೊಳ್ಳೇಗಾಲಕ್ಕೆ ಸಂತೋಷ್ ಕುಟುಂಬ ಬೈಕ್ನಲ್ಲಿ ತೆರಳುತ್ತಿದ್ದಾಗ ಜಿನಕನಹಳ್ಳಿ ಸಮೀಪ ಭತ್ತ ಕತ್ತರಿಸುವ ಯಂತ್ರ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ನಿಂದ ನಾಲ್ವರು ಕೆಳಕ್ಕೆ ಬಿದ್ದು, ಸ್ಥಳದಲ್ಲೇ ಮೂವರು ಅಸುನೀಗಿದರು. ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಸಾವನ್ನಪ್ಪಿದ್ದಾನೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಅಪಘಾತದಲ್ಲಿ ಇಬ್ಬರು ಸಾವು: ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟು, ಯುವಕನೋರ್ವ ಗಾಯಗೊಂಡ ಘಟನೆ ಹನೂರು ತಾಲೂಕಿನ ದೊಡ್ಡಲಾತ್ತೂರು ಬಳಿ ಸೋಮವಾರ ಸಂಜೆ ನಡೆಯಿತು. ದೊಡ್ಡಾಲತ್ತೂರು ಗ್ರಾಮದ ಶರತ್ (22), ಕೆಂಪನಟ್ಟಿ ಗ್ರಾಮದ ಮದನ್ ಕುಮಾರ್ ಮೃತರು. ಪುದುರಾಮಪುರ ಗ್ರಾಮದ ಕುಮಾರ್ ಎಂಬವರು ತೀವ್ರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕಾರ್ ಪಾರ್ಕಿಂಗ್ ವಿಚಾರಕ್ಕೆ ಗಲಾಟೆ: ನಾಲ್ವರ ಸಾವು