ಚಾಮರಾಜನಗರ: ಶಿಕ್ಷಣ ಸಚಿವರ ಉಸ್ತುವಾರಿ ಕ್ಷೇತ್ರ ಚಾಮರಾಜನಗರದಲ್ಲೇ ಖಾಸಗಿ ಶಿಕ್ಷಣ ಸಂಸ್ಥೆಯು ಶೇ. 25 ಶುಲ್ಕ ಹೆಚ್ಚಳ ಮಾಡಿರುವುದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ನಗರದ ಸೇವಾ ಭಾರತಿ ಶಿಕ್ಷಣ ಸಂಸ್ಥೆ ಶುಲ್ಕ ಹೆಚ್ಚಳ ಮಾಡಿದ್ದು, ಹಣ ಪಾವತಿಸದ ಮಕ್ಕಳಿಗೆ ಆನ್ಲೈನ್ ಪಾಠ ಮಾಡುವುದಿಲ್ಲ ಎಂದು ಆಡಳಿತ ಮಂಡಲಿ ಹೇಳುತ್ತಿದೆ.
ಈ ಹಿನ್ನೆಲೆಯಲ್ಲಿ ಪಾಲಕರು ಮತ್ತು ಆಡಳಿತ ಮಂಡಲಿಯ ನಡುವೆ ಇಂದು ಜಟಾಪಟಿ ನಡೆಯಿತು. ಈಗ ಶೇ.70 ರಷ್ಟು ಶುಲ್ಕ ಪಾವತಿಸಿ ಸೆಪ್ಟೆಂಬರ್ನಲ್ಲಿ ಉಳಿದ ಶೇ.30 ರಷ್ಟನ್ನು ಪಾವತಿಸಬೇಕೆಂದು ಶಾಲಾ ಆಡಳಿತ ಮಂಡಲಿ ಹೇಳುತ್ತಿದೆ. ಹೀಗಾಗಿ ಶುಲ್ಕ ಹೆಚ್ಚಳಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದೇವೆ. ಕೊರೊನಾ ಸಂಕಷ್ಟ ಕಾಲದಲ್ಲೂ ಶುಲ್ಕ ಹೆಚ್ಚಿಸಿರುವುದು ಖಂಡನೀಯ. ಶಿಕ್ಷಣ ಸಚಿವರ ಉಸ್ತುವಾರಿ ಕ್ಷೇತ್ರದ್ದೇ ಈ ಕಥೆಯಾದರೆ ಹೇಗೆ? ಎಂದು ಪಾಲಕರಾದ ಡಾ.ಮಂಜುನಾಥ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸದ್ಯ ಶುಲ್ಕ ಪಾವತಿಸದಿರಲು ಪಾಲಕರು ನಿರ್ಧರಿಸಿದ್ದಾರೆ. ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಯಾವ ರೀತಿಯ ಕ್ರಮಕ್ಕೆ ಮುಂದಾಗುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಹೊಸಪೇಟೆಯಲ್ಲಿ ವೃದ್ಧನ ಮೇಲೆ ಹಲ್ಲೆ ಪ್ರಕರಣ: ಶಾಸಕ ಪರಮೇಶ್ವರ್ ನಾಯ್ಕ್ ಸಹೋದರನ ವಿರುದ್ಧ ಕೇಸ್