ಚಾಮರಾಜನಗರ: ಕಳೆದ ವರ್ಷ ರಕ್ಕಸ ಬೆಂಕಿಗೆ ನಲುಗಿದ್ದ ಬಂಡೀಪುರ, ಈ ಸಲ ಮಹಾಮಾರಿ ಕೊರೊನಾ ಭೀತಿಯಿಂದ ಪ್ರವಾಸಿಗರಿಲ್ಲದೇ ತತ್ತರಿಸಿದೆ. ಕೊರೊನಾ ವೈರಸ್ ಭೀತಿ ಹಿನ್ನೆಲೆ ಚಾಮರಾಜನಗರ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ, ಮಾರ್ಚ್ 22 ರವರೆಗೆ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರಿಲ್ಲದೇ ಬಂಡೀಪುರ ಖಾಲಿಯಾಗಿದೆ. ಪರಿಸರ ಪ್ರೇಮಿಗಳ ಸ್ವರ್ಗದಂತಿರುವ ಹುಲಿ ಸಂರಕ್ಷಿತ ಅಭಯಾರಣ್ಯ, ಈಗ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ.
150 ಕ್ಕೂ ಹೆಚ್ಚು ಹುಲಿ, ಆನೆಗಳು, ಕಾಡೆಮ್ಮೆ, ಚಿರತೆ, ಜಿಂಕೆ ಸೇರಿದಂತೆ ಇನ್ನಿತರ ವನ್ಯ ಜೀವಿಗಳು ಪ್ರವಾಸಿಗರ ಕಾಟವಿಲ್ಲದೇ ನಿರುಮ್ಮಳವಾಗಿವೆ. ಮತ್ತೊಂದೆಡೆ ಬಂಡೀಪುರ ಎಂದಾಕ್ಷಣ ಸಫಾರಿ ವೇಳೆ ಹುಲಿಯನ್ನು ನೋಡುವುದೇ ಖುಷಿ ಅಂದು ಕೊಂಡವರಿಗೆ ಈಗ ಕೊರಾನಾ ವೈರಸ್ ಆಸೆಗೆ ತಣ್ಣೀರು ಎರಚಿದೆ.
ಇದು ಬಂಡೀಪುರದ ಆದಾಯದ ಮೇಲೆ ಇದು ಪರಿಣಾಮ ಬೀಳಲಿದೆಯಾದರೂ ಸಾರ್ವಜನಿಕರ ಹಿತ ದೃಷ್ಟಿಯಿಂದ ಈ ಕ್ರಮ ಒಳ್ಳೆಯದೇ ಆಗಿದೆ. ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಮೇಲುಕಾಮನಹಳ್ಳಿ ಬಳಿಯ ಸಫಾರಿ ಕೌಂಟರ್, ಇದೀಗ ಮೌನಕ್ಕೆ ಶರಣಾಗಿದ್ದರೇ, ಕಾಡಿನ ಹಾದಿಯನ್ನು ಸವೆಸಿದ್ದ ಸಫಾರಿ ವಾಹನಗಳು ಸದ್ದು ಮಾಡದೆ ನಿಂತಿವೆ. ಕಳೆದ ವರ್ಷ ಫೆಬ್ರವರಿ- ಮಾರ್ಚ್ನಲ್ಲೇ ಬೆಂಕಿಗೆ ಬಂಡೀಪುರ ನಲುಗುತ್ತಿದ್ದರಿಂದ ಸಫಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈಗ ಕೊರೊನಾ ಭೀತಿಯಿಂದ ಮಾರ್ಚ್ನಲ್ಲೇ ಸಫಾರಿ ಬಂದ್ ಆಗಿರುವುದು ಕಾಕಾತಾಳಿಯವೇ ಆಗಿದೆ.
ರೆಸಾರ್ಟ್ಗಳು, ಹೋಂ ಸ್ಟೇಗಳು ಪ್ರವಾಸಿಗರಿಲ್ಲದೇ ಖಾಲಿ ಖಾಲಿ ಹೊಡೆಯುತ್ತಿದ್ದು, ಬಂಡೀಪುರದಲ್ಲಿನ ವಸತಿಗೃಹಗಳ ಆನ್ಲೈನ್ ಬುಕ್ಕಿಂಗ್ ಕೂಡ ಸ್ಥಗಿತಗೊಳಿಸಲಾಗಿದ್ದು, ಈಗಾಗಲೇ ಕಾಯ್ದಿರಿಸಿರುವುದನ್ನು ರದ್ದುಗೊಳಿಸಲಾಗಿದೆ.