ಚಾಮರಾಜನಗರ: ಸಾರ್ವಜನಿಕ ವಲಯದಂತೆ ಕ್ರೀಡಾ ಕ್ಷೇತ್ರವಾದ ಭಾರತೀಯ ಕ್ರಿಕೆಟ್‌ನಲ್ಲೂ ಮೀಸಲಾತಿ ಕೊಡಬೇಕು. ಭಾರತೀಯ ಕ್ರಿಕೆಟ್‌ನಲ್ಲಿ ಶೇ. 70ರಷ್ಟು ಮೇಲ್ಜಾತಿಯವರೇ ಇದ್ದಾರೆ. ಹೀಗಾಗಿ ಕ್ರಿಕೆಟ್‌ನಲ್ಲೂ ಮೀಸಲಾತಿ ಜಾರಿಯಾಗಬೇಕು ಎಂದು ನಟ ಚೇತನ್ ಒತ್ತಾಯಿಸಿದರು.
ಚಾಮರಾಜನಗರದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ನಡೆದ ಅಂಬೇಡ್ಕರ್ ಪರಿನಿಬ್ಬಾಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದಲ್ಲಿ 2016ರಿಂದ 6 ಮಂದಿ ಕರಿಯರಿಗೆ ಮೀಸಲಾತಿ ನೀಡಲಾಗುತ್ತಿದೆ. ಅದೇ ರೀತಿ ಭಾರತೀಯ ಕ್ರಿಕೆಟ್‌ನಲ್ಲೂ ಮೀಸಲಾತಿ ಸಿಗಬೇಕು. ಇಲ್ಲಿನ ಕ್ರಿಕೆಟ್ ಶ್ರೀಮಂತವಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಸಮುದಾಯದವರಿಗೆ ಮೀಸಲಾತಿ ನೀಡಿದಲ್ಲಿ ಕ್ರಿಕೆಟ್ ತಂಡ ಇನ್ನಷ್ಟು ಉತ್ತಮವಾಗುತ್ತದೆ ಎಂದರು.
ಮೀಸಲಾತಿಯು ಪ್ರಾತಿನಿಧ್ಯವೇ ಹೊರತು ಆರ್ಥಿಕ ಸಬಲೀಕರಣ ಅಲ್ಲವೇ ಅಲ್ಲ. ನಮಗೆ ಮೀಸಲಾತಿ ಎಂದರೆ ಪ್ರತಿಯೊಂದು ಸಮುದಾಯಕ್ಕೂ ಆಯಾ ಜನಸಂಖ್ಯೆ ಆಧಾರದ ಮೇಲೆ ಶಿಕ್ಷಣ, ಉದ್ಯೋಗ, ರಾಜಕೀಯ, ಭೌಗೋಳಿಕವಾಗಿ ಪ್ರಾಧ್ಯಾನ್ಯತೆ ನೀಡುವ ಒಂದು ಪ್ರಯತ್ನವಾಗಿದೆ. ಮೀಸಲಾತಿ ಎಂದರೆ ಪ್ರಾಧಾನ್ಯತೆಯಷ್ಟೇ ಅಲ್ಲದೆ ಅದೊಂದು ನ್ಯಾಯ ಎಂದು ಚೇತನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರವು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಶ್ರೀಗಳ ಹೋರಾಟ ಹಾಗೂ ನಾಗಮೋಹನ್ ದಾಸ್ ವರದಿ ಪ್ರಕಾರ ಎಸ್‌ಟಿಗೆ ಶೇ. 3ರಿಂದ ಶೇ. 7ಕ್ಕೆ, ಎಸ್‌ಸಿಗೆ ಶೇ. 15ರಿಂದ 17ಕ್ಕೆ ಮೀಸಲಾತಿ ಹೆಚ್ಚಿಸಿರುವುದು ಒಳ್ಳೆಯ ನಿರ್ಧಾರ ಎಂದು ಹೇಳಿದರು.
ಇದನ್ನೂ ಓದಿ: 'ಪಾಕಿಸ್ತಾನಿಗಳು ನಮ್ಮ ಸಹೋದರರು, ಶತ್ರುಗಳಲ್ಲ' - ನಟ ಚೇತನ್
ಅಲ್ಲದೆ, ಒಕ್ಕಲಿಗ ಸಮುದಾಯ ಶೇ 4ರಿಂದ 12ರವರೆಗೆ ಮೀಸಲಾತಿ ಬೇಕು ಎಂದು ಹೋರಾಟ ಮಾಡುವುದು ಸಮಂಜಸವಾಗಿದೆ. ಆದರೆ ಪಂಚಮಸಾಲಿ ಸಮುದಾಯವನ್ನು 3ಬಿಯಿಂದ 2ಎಗೆ ಸೇರಿಸಬೇಕು ಎಂಬ ಆಗ್ರಹವು ಸ್ವಾರ್ಥದ ಹೋರಾಟವಾಗಿದೆ. ನ್ಯಾ.ಸದಾಶಿವ ಆಯೋಗದ ಪ್ರಕಾರ ಒಳ ಮೀಸಲಾತಿಯು ನ್ಯಾಯಯುತ ಬೇಡಿಕೆಯಾಗಿದೆ. ಸರೋಜಿನಿ ಮಹಿಷಿ ವರದಿ ಆಧಾರಿತವಾಗಿ ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಬೇಕು. ಶಿಕ್ಷಣ, ಉದ್ಯೋಗ ಮೀಸಲಾತಿಯಲ್ಲಿ ನಮಗೆ ನ್ಯಾಯ ಸಂಪೂರ್ಣ ಪ್ರಾಧಾನ್ಯತೆ ಸಿಗುವ ತನಕ ಬದಲಾಯಿಸಬಾರದು. ಜನಸಂಖ್ಯೆ ಆಧಾರವಾಗಿ ಮೀಸಲಾತಿ ಕೊಡುವುದು ನ್ಯಾಯವಾಗಿದೆ ಎಂದು ಹೇಳಿದರು.
ತಿ.ನರಸೀಪುರದ ನಳಂದ ಬುದ್ದವಿಹಾರ ಬೋಧಿರತ್ನ ಬಂತೇಜಿ ಅವರು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಕರ್ನಾಟಕ ಬೌದ್ದ ಸಮಾಜ ರಾಜ್ಯಾಧ್ಯಕ್ಷ ಹ.ರಾ.ಮಹೇಶ್, ಬಿವಿಎಫ್ ಜಿಲ್ಲಾಧ್ಯಕ್ಷ ಚಂದ್ರಕಾಂತ್ ಇತರರು ಇದ್ದರು.
ಇದನ್ನೂ ಓದಿ: ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ಲಿಂಗ ಸಮಾನತೆ ಶಿಕ್ಷಣ ನೀಡಬೇಕು: ನಟ ಚೇತನ್