ಚಾಮರಾಜನಗರ: ಶತಮಾನಗಳ ಕನಸಾದ ರಾಮಮಂದಿರ ನಿರ್ಮಾಣದ ಭೂಮಿಪೂಜೆ ಇಂದು ನಡೆಯುತ್ತಿರುವ ಹಿನ್ನೆಲೆಯಲ್ಲಿ ನಿರ್ವಿಘ್ನವಾಗಿ ಕಾರ್ಯ ನಡೆಯಲೆಂದು ಜಿಲ್ಲೆಯ ವಿವಿಧೆಡೆ ಇಂದು ವಿಶೇಷ ಪೂಜೆ ನಡೆಸಲಾಯಿತು.
ನಗರದ ಪಟ್ಟಾಭಿ ರಾಮಮಂದಿರದಲ್ಲಿ ವಿಪ್ರ ಬಾಂಧವರು ಶ್ರೀರಾಮತಾರಕ ಹೋಮ ನಡೆಸಿ ಶಿಲಾನ್ಯಾಸ ಕಾರ್ಯಕ್ರಮ ಸುಸೂತ್ರವಾಗಿ ನಡೆದು ಮಂದಿರ ಲೋಕಾರ್ಪಣೆ ಶೀಘ್ರವಾಗಲೆಂದು ಪ್ರಾರ್ಥಿಸಿದರು. ಇದೇ ವೇಳೆ ಹನುಮಾನ್ ಚಾಲೀಸಾ, ರಾಮನಾಮವನ್ನು ಜಪಿಸಲಾಯಿತು.
ಪ್ರಕೃತಿಯ ಐಸಿರಿಯಲ್ಲಿರುವ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಂದಿರ ಭೂಮಿಪೂಜೆ ಪ್ರಯುಕ್ತ ಅಭಿಷೇಕ, ದೇವರಿಗೆ ವಿಶೇಷ ಅಲಂಕಾರ ಮಾಡಿ ಮಂದಿರ ಕಾರ್ಯಕ್ಕಾಗಿ ಪ್ರಾರ್ಥಿಸಲಾಗಿದೆ ಎಂದು ಅರ್ಚಕರಾದ ಗೋಪಿ, ವಾಸು ತಿಳಿಸಿದ್ದಾರೆ. ಉಳಿದಂತೆ, ಚಾಮರಾಜೇಶ್ವರ ದೇಗುಲ, ಹರಳುಕೋಟೆ ಜನಾರ್ಧನಸ್ವಾಮಿ ಸೇರಿದಂತೆ ಮುಜರಾಯಿ ವ್ಯಾಪ್ತಿಗೆ ಬರುವ ದೇಗುಲಗಳಲ್ಲಿ ವಿಶೇಷ ಪೂಜೆ ನಡೆದಿದೆ.
ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲೂ ಕೂಡ ರಾಮಮಂದಿರ ಕಾರ್ಯದ ಯಶಸ್ಸಿಗೆ ಪ್ರಾರ್ಥಿಸಿ ಮಧ್ಯಾಹ್ನ ಸಂಕಲ್ಪ, ಅಭಿಷೇಕ ನಡೆಯಲಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.