ಚಾಮರಾಜನಗರ: ಪೂರ್ವ ಮುಂಗಾರು ಮಳೆ ಚುರುಕುಗೊಂಡಿದೆ. ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಬಹುಪಾಲು ಅರಣ್ಯ ಪ್ರದೇಶ ಹಸಿರಾಗುತ್ತಿರುವುದು ಅರಣ್ಯ ಇಲಾಖೆಯಲ್ಲಿ ಮಂದಹಾಸ ಮೂಡಿಸಿದೆ. ಬಂಡೀಪುರ ಹುಲಿ ಸಂರಕ್ಷಿತ, ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ, ಕಾವೇರಿ ಹಾಗೂ ಮಲೆಮಹದೇಶ್ವರ ವನ್ಯಜೀವಿಧಾಮದ ವಿವಿಧ ವಲಯಗಳು ಹಾಗೂ ಕಾಡಂಚಿನಲ್ಲಿ ಹಸಿರು ಚಿಗುರೊಡೆಯುತ್ತಿದ್ದು ಸದ್ಯ ಕಾಳ್ಗಿಚ್ಚಿನ ಆತಂಕ ದೂರವಾಗಿದೆ.
ಬೇಸಿಗೆಯಿಂದ ಬಾಡಿ ಹೋಗಿದ್ದ ಗಿಡಮರಗಳು ಹಾಗೂ ಬೆಂಕಿ ರೇಖೆ ನಿರ್ಮಾಣದ ಸಮಯದಲ್ಲಿ ಕುರುಚಲು ಗಿಡಗಳನ್ನು ತೆರವುಗೊಳಿಸಿದ್ದ ಸ್ಥಳದಲ್ಲಿ ಈಗ ಹಸಿರು ಚಿಗುರೊಡೆದಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರಾಳರಾಗಿದ್ದಾರೆ. ನಿತ್ಯ ಒಂದಲ್ಲ ಒಂದು ದಿನ ಕಾಡುಗಳಲ್ಲಿ ಮಳೆಯಾಗುತ್ತಿದ್ದು, ಬೆಂಕಿ ಆತಂಕ ದೂರವಾಗಿದೆ.
ಇದನ್ನೂ ಓದಿ: ಜಿಂಬಾಬ್ವೆಯಲ್ಲಿ ಕಂದಕಕ್ಕೆ ಬಿದ್ದ 106 ಪ್ರಯಾಣಿಕರಿದ್ದ ಬಸ್: 35 ಮಂದಿ ಸಾವು
ಕಳೆದ ನಾಲ್ಕೈದು ತಿಂಗಳಿನಿಂದ ಅರಣ್ಯ ವೀಕ್ಷಕರು ಹಾಗೂ ಇತರ ಸಿಬ್ಬಂದಿಗೆ ರಜೆಯೂ ಇಲ್ಲದೇ ಬೆಂಕಿ ಬೀಳುವ ಆತಂಕದಲ್ಲಿ ನಿರಂತರ ಗಸ್ತು ನಡೆಸುತ್ತಿದ್ದರು. ವೀಕ್ಷಣಾ ಗೋಪುರಗಳಲ್ಲಿ ಕುಳಿತು ಹದ್ದಿನಕಣ್ಣು ಇಡುವುದು, ಹೆದ್ದಾರಿಯಲ್ಲಿ ಗಸ್ತು ತಿರುಗುವುದು, ಚೆಕ್‌ಪೋಸ್ಟ್ ಬಳಿ ಸವಾರರಿಗೆ ಜಾಗೃತಿ ಮೂಡಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿದ್ದರು.
ಬಿಆರ್ಟಿ ಮತ್ತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೆಲವೆಡೆ ಮಾತ್ರ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು, ತತ್ ಕ್ಷಣವೇ ಬೆಂಕಿ ನಂದಿಸಲಾಗಿದ್ದನ್ನು ಬಿಟ್ಟರೆ ಕಾಡು ಈ ಬಾರಿ ಬೆಂಕಿಗೆ ನಲುಗಿಲ್ಲ. ಮಳೆ ಆರಂಭವಾಗಿರುವುದರಿಂದ ಕಾಡಿಗೆ ಬೆಂಕಿ ಬೀಳುವ ಭಯವೂ ಇರುವುದಿಲ್ಲ.