ಚಾಮರಾಜನಗರ : ನಿರಂತರ ಮಳೆಯಿಂದಾಗಿ ತಮಿಳುನಾಡಿನವರ ಶನಿಕಾಟ ಕಳೆದ 3 ವರ್ಷದಿಂದ ತಪ್ಪಿದೆ. ನೀರು ಕೊಡಲಾಗಲ್ಲ ಎಂಬ ಪರಿಸ್ಥಿತಿ ಉದ್ಭವಿಸಿಲ್ಲ. ಮೇಕೆದಾಟು ಯೋಜನೆಯ ಬಗ್ಗೆಯೂ ಅವರ ತಕರಾರು ಸಂಬಂಧ ಸಿಎಂ ಬೊಮ್ಮಾಯಿ ಕೇಂದ್ರದಲ್ಲಿ ಮಾತನಾಡುತ್ತಿದ್ದು ಆದಷ್ಟು ಬೇಗ ಯೋಜನೆ ಅನುಷ್ಠಾನಗೊಳಿಸುತ್ತೇವೆ ಎಂದು ಕಂದಾಯ ಸಚಿವ ಆರ್ ಅಶೋಕ್ ಭರಸವೆ ನೀಡಿದರು. ಕೊಳ್ಳೇಗಾಲದ ದಾಸನಪುರ ಗ್ರಾಮದ ಸುತ್ತಮುತ್ತಲ ಮಳೆಹಾನಿ ಪ್ರದೇಶಗಳಿಗೆ ಅವರು ಭೇಟಿ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಪಾಕ್ ಬೆಂಬಲಿತ ಸಂಸ್ಥೆಗೆ ಕಡಿವಾಣ: ಪಿಎಫ್ಐ ಸೇರಿದಂತೆ ಪಾಕ್ ಬೆಂಬಲಿಸುವ ಸಂಸ್ಥೆಗಳನ್ನು ನಿಷೇಧಿಸಬೇಕು ಎಂಬವರಲ್ಲಿ ನಾನೂ ಓರ್ವ. ಕೇಂದ್ರ ಸರ್ಕಾರವೂ ಇದೇ ನಿಲುವು ಹೊಂದಿದೆ. ಆದರೆ, ಒಂದು ಸಂಸ್ಥೆ ಬ್ಯಾನ್ ಮಾಡಿದರೆ ಮತ್ತೊಂದು ಹೆಸರಲ್ಲಿ ಬರುತ್ತಾರೆ. ಆದ್ದರಿಂದ ಅವರ ಲೀಡರ್ಗಳ ಮಾಹಿತಿ ಪಡೆದು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಬ್ಯಾನ್ ಮಾಡಲಾಗುವುದು ಎಂದರು.
ಫಾಝಿಲ್ ಹತ್ಯೆ ಬಗ್ಗೆ ನಿಖರ ಕಾರಣ ತಿಳಿಯದಿದ್ದರಿಂದ ಪರಿಹಾರ ಕೊಟ್ಟಿಲ್ಲ. ಹರ್ಷ ಮತ್ತು ಪ್ರವೀಣ್ ಹತ್ಯೆಗೆ ಕೋಮುದ್ವೇಷ ಕಾರಣವಾಗಿದ್ದರಿಂದ ಪರಿಹಾರ ಕೊಡಲಾಗಿದೆ ಎಂದು ಹೇಳಿದರು.
ಸಂವಿಧಾನ ಬದ್ಧ ಮೀಸಲಾತಿ : ಬಿಬಿಎಂಪಿ ಚುನಾವಣೆಯ ಮೀಸಲಾತಿ ಪಟ್ಟಿ ವಸ್ತು ನಿಷ್ಟವಾಗಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸಂವಿಧಾನಬದ್ಧವಾಗಿ ಮೀಸಲಾತಿ ಹಂಚಿಕೆಯಾಗಿದೆ. ಗೆದ್ದವರು ಅದೇ ವಾರ್ಡ್ನಲ್ಲಿ ಸ್ಪರ್ಧಿಸಬೇಕೆಂಬ ಪಾಳೇಗಾರಿಕೆಗೆ ಅವಕಾಶವಿಲ್ಲ, ಮೀಸಲಾತಿ ಬದಲಾಗುತ್ತಿರುತ್ತದೆ ಅದೇ ರೀತಿ ಆಗಿದೆ, ಮಹಿಳೆಯರು, ದಲಿತರಿಗೆ ಅನ್ಯಾಯ ಆಗಿಲ್ಲ ಎಂದರು.
ಇದನ್ನೂ ಓದಿ: ಕನ್ನಡ ಸಾಹಿತ್ಯ ಪರಿಷತ್ ಆ್ಯಪ್ ಬಿಡುಗಡೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ