ಚಾಮರಾಜನಗರ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಬೇಕೆಂದು ಸ್ಥಳೀಯರು ಪ್ರತಿಭಟಿಸಿದ್ದಾರೆ.
ಮಹದೇಶ್ವರ ಬೆಟ್ಟದ ನಿವಾಸಿಗಳು, ರೈತ ಸಂಘ, ಮಹಿಳಾ ಸ್ವಸಹಾಯ ಸಂಘಗಳ ಕಾರ್ಯಕರ್ತರು ಜಂಟಿಯಾಗಿ ಮಹದೇಶ್ವರ ಬೆಟ್ಟ ಪ್ರವೇಶ ದ್ವಾರದ ಚೆಕ್ ಪೋಸ್ಟ್ ಬಳಿ ಬೃಹತ್ ಪ್ರತಿಭಟನೆ ನಡೆಸಿ ದೇಗುಲ ಬಂದ್ ಮಾಡುವಂತೆ ಆಗ್ರಹಿಸಿದ್ದಾರೆ.
ಹೊರ ಜಿಲ್ಲೆಗಳಿಂದ ಬರುವ ಭಕ್ತರಿಗೆ ಬೆಟ್ಟದ ತಪ್ಪಲಿನ ತಾಳಬೆಟ್ಟದಲ್ಲಿಯೇ ಪ್ರವೇಶ ನಿಷೇಧಿಸಬೇಕು. ಜೊತೆಗೆ, ಹೊರ ಗ್ರಾಮದವರು ಬೆಟ್ಟಕ್ಕೆ ಬರದಂತೆ ತಡೆಯಬೇಕೆಂದು ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ. ಲಾಕ್ ಡೌನ್ ಸಡಿಲಿಕೆ ಬಳಿಕ ಬೆಟ್ಟಕ್ಕೆ ಭಕ್ತರ ಪ್ರವೇಶ ಕಲ್ಪಿಸಲಾಗಿತ್ತು. ಇತ್ತೀಚೆಗೆ ಭಕ್ತರ ಸಂಖ್ಯೆಯಲ್ಲಿ ಏರಿಕೆ ಕಂಡಿತ್ತು.
ಕಾರ್ಯದರ್ಶಿ ಸ್ಪಷ್ಟನೆ:
ಸ್ಥಳೀಯರು ನಡೆಸುತ್ತಿರುವ ಪ್ರತಿಭಟನೆಗೆ ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಸ್ಪಷ್ಟನೆ ನೀಡಿದ್ದು, ಬರುವ ಭಕ್ತರಿಂದ ಕೊರೊನಾ ಹರಡಲಿದೆ ಎಂಬ ಸ್ಥಳೀಯರ ವಾದವನ್ನು ಅಲ್ಲಗಳೆದಿದ್ದಾರೆ. ಈಗ 3-4 ಸಾವಿರ ಮಂದಿ ಭಕ್ತರಷ್ಟೇ ಬರುತ್ತಿದ್ದು 20 ಸಾವಿರ ಮಂದಿ ಬಂದರೂ ಸಾಮಾಜಿಕ ಅಂತರ ಕಾಪಾಡಲು ಪ್ರಾಧಿಕಾರ ಸನ್ನದ್ಧವಾಗಿದೆ. ಬರುವ ಭಕ್ತರಿಗೆ ಸ್ಕ್ರೀನಿಂಗ್ ಮಾಡುವ ಜೊತೆಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ತಾಳಬೆಟ್ಟದಲ್ಲೂ ಸ್ಕ್ರೀನಿಂಗ್ ಮಾಡಲು ಉದ್ದೇಶಿಸಲಾಗಿದೆ, ಭಕ್ತರಿಂದ ಸ್ಥಳೀಯರಿಗೆ ವೈರಸ್ ತಗುಲಲಿದೆ ಎಂಬ ವಾದವನ್ನು ನಿರಾಕರಿಸಿದ್ದಾರೆ.
ದೇಗುಲದಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಸಂಪೂರ್ಣ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸುವೆ ಎಂದು ಹೇಳಿದ್ದು, ಪರೋಕ್ಷವಾಗಿ ದೇಗುಲ ಬಂದ್ ಮಾಡುವುದಿಲ್ಲ ಎಂಬ ಸಂದೇಶ ನೀಡಿದ್ದಾರೆ.