ಚಾಮರಾಜನಗರ : ಎಂಇಎಸ್ ಪುಂಡರ ವಿರುದ್ಧ ಚಾಮರಾಜನಗರದಲ್ಲಿ ವಿವಿಧ ಸಂಘಟನೆಗಳು ಸರಣಿ ಪ್ರತಿಭಟನೆ ನಡೆಸಿ ಮರಾಠಿ ಏಕೀಕರಣ ಸಮಿತಿಯನ್ನು ಕೂಡಲೇ ನಿಷೇಧಿಸಬೇಕು ಮತ್ತು ಪುಂಡರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿದರು.
ಇಂದು ಮೊದಲಿಗೆ ಕುರುಬ ಸಮಾಜ ಹಾಗೂ ಸಂಗೊಳ್ಳಿ ರಾಯಣ್ಣ ಯುವ ವೇದಿಯಿಂದ ಚಾಮರಾಜೇಶ್ವರ ದೇವಾಲಯ ಮುಂಭಾಗದಿಂದ ಜಿಲ್ಲಾಡಳಿತ ಭವನದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಧ್ವಂಸ ಗೊಳಿಸಿರುವ ಎಂಇಎಸ್ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧ ಮಾಡಬೇಕು, ಪುಂಡರನ್ನು ಕೂಡಲೇ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಇದಾದ ನಂತರ, ಯಳಂದೂರು ತಾಲೂಕಿನ ವಕೀಲರು ಕೂಡ ಇಂದು ನ್ಯಾಯಾಲಯ ಆವರಣದಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಬ್ಬರು ಭಾಷಿಕರ ನಡುವೆ ಒಡಕು ಮೂಡಿಸುತ್ತಿರುವವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಉದ್ಧವ್ ಠಾಕ್ರೆಗೆ ತಿಥಿ : ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಕನ್ನಡಪರ ಹೋರಾಟಗಾರರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಉದ್ಧವ್ ಠಾಕ್ರೆ ಭಾವಚಿತ್ರಕ್ಕೆ ಚಪ್ಪಲಿ, ಟೊಮ್ಯಾಟೊ ಹೊಡೆದು ಕಡ್ಲೆಪುರಿ ಎರಚಿ "ತಿಥಿ" ಮಾಡುವ ಮೂಲಕ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಸಾಂವಿಧಾನಿಕ ಹುದ್ದೆಯಲ್ಲಿರುವ ಸಿಎಂ ಒಬ್ಬರು ಭಾಷೆ-ಭಾಷೆ ನಡುವೆ ವೈಮನಸ್ಸು ಮೂಡಿಸುತ್ತಿರುವುದು ಸರಿಯಲ್ಲ. ಠಾಕ್ರೆ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು. ರಾಜ್ಯ ಸರ್ಕಾರವೂ ಮೀನಾಮೇಷ ಎಣಿಸದೇ ಎಂಇಎಸ್ ಸಂಘಟನೆ ನಿಷೇಧಿಸಬೇಕೆಂದು ಆಗ್ರಹಪಡಿಸಿದರು.
ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಭಾವಚಿತ್ರಕ್ಕೆ ಬೆಂಕಿ ಇಟ್ಟರು. ಚಾಮರಾಜನಗರದಲ್ಲಿ ಕಳೆದ ಮೂರು ದಿನಗಳಿಂದಲೂ ಎಂಇಎಸ್ ಪುಂಡರ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಇಂದು ಅದರ ಕಾವು ಸ್ವಲ್ಪ ಹೆಚ್ಚೇ ಇದ್ದಿದ್ದು ಕಂಡು ಬಂದಿತು.