ಚಾಮರಾಜನಗರ: ಮೈಸೂರಿನಿಂದ ಹೆಲಿಕಾಪ್ಟರ್ ಮೂಲಕ ಬಿಳಿಗಿರಿ ರಂಗನ ಬೆಟ್ಟದ ತಪ್ಪಲಿನ ಪ್ರದೇಶಕ್ಕೆ ಬಂದಿಳಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕುಟುಂಬ, 20 ಕಿ.ಮೀ ರಸ್ತೆ ಮಾರ್ಗವಾಗಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.
ಬೆಟ್ಟದ ತಪ್ಪಲಿನಲ್ಲಿರುವ ವಡ್ಡಗೆರೆ ಬಿದ್ದಾಂಜನೇಯ ದೇವಾಸ್ಥಾನ ಸಮೀಪ ಸ್ಥಾಪಿಸಿರುವ ಮೂರು ಹೆಲಿಪ್ಯಾಡ್ಗಳಲ್ಲಿ ಮೂರು ಹೆಲಿಕಾಪ್ಟರ್ ಬಂದಿಳಿದಿದ್ದು, ರಾಷ್ಟ್ರಪತಿ ದಂಪತಿ, ಅಂಗರಕ್ಷಕರು ಮತ್ತು ರಾಷ್ಟ್ರಪತಿಗಳ ವೈಯಕ್ತಿಕ ವಸ್ತುಗಳನ್ನು ಹೊತ್ತು ಇಳಿದಿವೆ. 12 ಬೆಂಗಾವಲು ವಾಹನಗಳ ಮೂಲಕ ದೇವಾಲಯ ಭೇಟಿ ಮಾಡಿರುವ ರಾಷ್ಟ್ರಪತಿ ದಂಪತಿ ಪುರಾಣ ಪ್ರಸಿದ್ಧ ಬಿಳಿಗಿರಿರಂಗನಾಥನ ದರ್ಶನ ಪಡೆದಿದ್ದಾರೆ.
ರಾಷ್ಟ್ರಪತಿ ದಂಪತಿ ಮತ್ತವರ ಪುತ್ರಿ ಬಂದಿದ್ದಾರೆ ಎನ್ನಲಾಗಿದೆ. ರಾಷ್ಟ್ರಪತಿಗಳ ಖಾಸಗಿ ಭೇಟಿಯಾಗಿರುವುದರಿಂದ ಮಾಧ್ಯಮಗಳು, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ದೇವಾಲಯ ದರ್ಶನ ಮುಗಿಸಿ ಮಧ್ಯಾಹ್ನದ ಬಳಿಕ ಮೆಡಿಕಲ್ ಕಾಲೇಜಿಗೆ ಆಗಮಿಸಿ ಆಸ್ಪತ್ರೆ ಉದ್ಘಾಟಿಸಲಿದ್ದಾರೆ.