ಚಾಮರಾಜನಗರ: ಜಾನಪದದ ತವರೂರು, ದಟ್ಟಾರಣ್ಯದ ಪ್ರಕೃತಿ ಸೌಂದರ್ಯ, ಎರಡು ರಾಜ್ಯಗಳ ಗಡಿ ಹಂಚಿಕೊಂಡಿರುವ ಚಾಮರಾಜನಗರಕ್ಕೆ ಇದೇ ಅಕ್ಟೋಬರ್ 7 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿ ನೀಡುತ್ತಿದ್ದು ಸಿಎಂ ಆಗಮನದತ್ತ ಎಲ್ಲರ ದೃಷ್ಟಿ ನೆಟ್ಟಿದೆ.
ಹೌದು.., ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ ದಿನವಾದ ಅಕ್ಟೋಬರ್ 7ಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಚಾಮರಾಜನಗರಕ್ಕೆ ಭೇಟಿ ನೀಡುತ್ತಿದ್ದು, ಅಂದು ಬೆಳಗ್ಗೆ 11.40 ಕ್ಕೆ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟಕ್ಕೆ ಭೇಟಿಯಿತ್ತು ದೇವರ ದರ್ಶನ ಪಡೆದು ಬಳಿಕ 3.30 ರಿಂದ 4.30ರವರೆಗೆ ಚಾಮರಾಜನಗರ ಮೆಡಿಕಲ್ ಕಾಲೇಜಿನ 450 ಹಾಸಿಗೆಗಳ ಆಸ್ಪತ್ರೆ ಉದ್ಘಾಟಿಸಲಿದ್ದಾರೆ.
ಚಾಮರಾಜನಗರಕ್ಕೆ ಮುಖ್ಯಮಂತ್ರಿಗಳಾದವರು ಬಂದರೆ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂಬ ಮೂಢನಂಬಿಕೆಗೆ ಈ ಹಿಂದೆ ಹಲವರು ಸಿಎಂಗಳು ಜೋತು ಬಿದ್ದವರೇ, ಆಮ್ಲಜನಕ ದುರಂತದ ನಡೆದ ಬಳಿಕವು ಅಂದು ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ ಜಿಲ್ಲೆಗೆ ಭೇಟಿ ನೀಡಿರಲಿಲ್ಲ. ಈಗ ಬೊಮ್ಮಾಯಿ ಗಡಿಜಿಲ್ಲೆಗೆ ಬಂದು ಮೂಢನಂಬಿಕೆಗೆ ಸಡ್ಡು ಹೊಡೆಯುವವರೋ ಇಲ್ಲ ದಸರಾ ನೆಪವೊಡ್ಡುವುರೋ ಎಂಬುದನ್ನು ಕಾದು ನೋಡಬೇಕಿದೆ.
ಕಾಕತಾಳೀಯ ಎಂಬಂತೆ ಅಧಿಕಾರ ಕಳೆದುಕೊಂಡಿದ್ದ ಎಸ್ ಆರ್ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್.ಆರ್.ಬೊಮ್ಮಾಯಿ 1988 ರಲ್ಲಿ ಚಾಮರಾಜನಗರ ತಾಲೂಕು ಕಚೇರಿ ಉದ್ಘಾಟನೆಗೆ ಜಿಲ್ಲೆಗೆ ಬಂದಿದ್ದರು. ಕಾಕತಾಳೀಯವೆಂಬಂತೆ, 1989 ರಲ್ಲಿ ರಾಜಕೀಯ ಕಾರಣಗಳಿಂದ ಅವರು ಸಿಎಂ ಕುರ್ಚಿಯಿಂದ ಕೆಳಗಿಳಿದಿದ್ದರು.
ಈಗ ಅವರ ಮಗ ಬಸವರಾಜ ಬೊಮ್ಮಾಯಿ ಮೂಢನಂಬಿಕೆಯನ್ನು ಪಕ್ಕಕ್ಕಿಟ್ಟು ಜಿಲ್ಲೆಗೆ ಬಂದರೇ ಅಪ್ಪನ ಕಾಲದಲ್ಲಿ ಆರಂಭವಾದ ಮೌಢ್ಯವನ್ನು ಮಗ ತೊಡೆದುಹಾಕುವ ಅವಕಾಶ ಸಿಕ್ಕಂತಾಗಲಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಜಿಲ್ಲೆಗೆ ಹತ್ತಾರು ಬಾರಿ ಭೇಟಿ ಕೊಟ್ಟು 5 ವರ್ಷಗಳ ಕಾಲ ಪೂರ್ಣಾವಧಿ ಅಧಿಕಾರ ಪೂರೈಸಿದ ಉದಾಹರಣೆ .

ಇನ್ನು, ರಾಮನಾಥ್ ಕೋವಿಂದ್ ಅವರು ಜಿಲ್ಲೆಗೆ ಭೇಟಿ ನೀಡುತ್ತಿರುವ ಎರಡನೇ ರಾಷ್ಟ್ರಪತಿಗಳಾಗಿದ್ದು, ಈ ಹಿಂದೆ 2006ರಲ್ಲಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಬಿಳಿಗಿರಿರಂಗನ ಬೆಟ್ಟದ ಹಾಡಿಗಳಿಗೆ ಭೇಟಿಯಿತ್ತು ಸೋಲಿಗರೊಂದಿಗೆ ಸಂವಾದ ನಡೆಸಿದ್ದರು.

ಸ್ಥಳ ಪರಿಶೀಲನೆ: ರಾಷ್ಟ್ರಪತಿ ಪ್ರವಾಸ ಹಿನ್ನೆಲೆಯಲ್ಲಿ ಈಗಾಗಲೇ ದಕ್ಷಿಣ ವಲಯ ಐಜಿಪಿ ಮಧುಕರ್ ಪವಾರ್, ಚಾಮರಾಜನಗರ ಡಿಸಿ ಡಾ.ಎಂ.ಆರ್.ರವಿ ಬಿಳಿಗಿರಿರಂಗನ ಬೆಟ್ಟದ ತಪ್ಪಲಿನ ವಡ್ಡಗೆರೆಯಲ್ಲಿ ತಾತ್ಕಾಲಿಕ ಹೆಲಿಪ್ಯಾಡ್, ಬಿಳಿಗಿರಿರಂಗನ ದೇವಾಲಯ, ಮೆಡಿಕಲ್ ಕಾಲೇಜಿನ ಸುತ್ತಮುತ್ತಲಿನ ಸ್ಥಳಗಳನ್ನು ಪರಿಶೀಲಿಸಿ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲು ಮುಂದಾಗಿದ್ದಾರೆ.