ಚಾಮರಾಜನಗರ: ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈಗ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಯುಗಾದಿ ಜಾತ್ರೆಗೂ ಅದರ ಬಿಸಿ ತಟ್ಟಿದೆ.
ಹೌದು, ಇದೇ 21 ರಿಂದ 25 ರವರೆಗೆ ನಡೆಯುವ ಮಾದಪ್ಪನ ಯುಗಾದಿ ಜಾತ್ರೆಯು, ಈ ವರ್ಷ ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮವಾಗಿ ಸರಳವಾಗಿ ಆಚರಿಸಲು ಮಲೆಮಹದೇಶ್ವರ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರ ನಿಶ್ಚಯಿಸಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜೈವಿಭವಸ್ವಾಮಿ ತಿಳಿಸಿದ್ದಾರೆ.
ಕೊಠಡಿಗಳು, ವಸತಿಗೃಹಗಳನ್ನು ಬರುವ ಭಕ್ತಾದಿಗಳಿಗೆ ಕೊಡದಿರಲು ಪ್ರಾಧಿಕಾರ ತೀರ್ಮಾನಿಸಿದ್ದು, ರಂಗಮಂದಿರ ಸಮೀಪ ಸಾವಿರಾರು ಮಂದಿ ಟೆಂಟ್ ಹಾಕುವುದಕ್ಕೂ ಬ್ರೇಕ್ ಹಾಕಲಾಗಿದೆ. ರಸ್ತೆಬದಿಯಲ್ಲಿ, ಮಾದಪ್ಪನ ಬೆಟ್ಟದ ಸಮೀಪದ ಸ್ಥಳಗಳಲ್ಲಿ ಸಹಸ್ರಾರು ಮಂದಿ ತಂಗಲು-ವಾಸ್ತವ್ಯ ಹೂಡಲು ಪ್ರಾಧಿಕಾರ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಲಕ್ಷಾಂತರ ಮಂದಿ ಸೇರುತ್ತಿದ್ದ ಯುಗಾದಿ ಜಾತ್ರೆಗೆ ಈ ಬಾರಿ ಕೊರೊನಾ ಕರಿಛಾಯೆ ಆವರಿಸಿದ್ದು, ಪ್ರಾಧಿಕಾರದ ಆದಾಯಕ್ಕೂ ಕತ್ತರಿ ಬೀಳಲಿದೆ.
ಬಿಆರ್ಟಿಗೂ ನಿರ್ಬಂಧ: ಬಂಡಿಪುರ ಅರಣ್ಯ ಪ್ರವೇಶ ನಿಷೇಧ ಮಾಡಿದ್ದ ಚಾಮರಾಜನಗರ ಜಿಲ್ಲಾಡಳಿತ ಇದೀಗ ಜಿಲ್ಲೆಯ ಮತ್ತೊಂದು ಹುಲಿ ಸಂರಕ್ಷಿತ ಅರಣ್ಯ, ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಬಿಆರ್ಟಿ ಗೂ ಪ್ರವೇಶ ನಿಷೇಧ ಮಾಡಿದೆ. ಇಂದಿನಿಂದ ಮುಂದಿನ ಆದೇಶದವರೆಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದೆ.
ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅನುಸರಣಾ ಕ್ರಮಗಳನ್ನ ಸಾರ್ವತ್ರಿಕವಾಗಿ ಪಾಲಿಸಲು ರಾಜ್ಯ ಸರ್ಕಾರದ ಆದೇಶದಂತೆ ಚಾಮರಾಜನಗರ ವಿಭಾಗದಡಿಯಲ್ಲಿ ಬರುವ ಬಿಆರ್ಟಿ ಯ ಕೆ. ಗುಡಿ ಜಂಗಲ್ ರೆಸಾರ್ಟ್ ಮತ್ತು ಸಫಾರಿ ಪ್ರದೇಶವನ್ನ ಇಂದಿನಿಂದ ಮುಂದಿನ ಆದೇಶದವರೆಗೆ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿರುವುದಿಲ್ಲ, ಈ ಕ್ರಮಕ್ಕೆ ಸಾರ್ವಜನಿಕರು ಸಹಕರಿಸಲು ಜಿಲ್ಲಾಡಳಿತ ಕೋರಿದೆ.