ಚಾಮರಾಜನಗರ: ಬಾಣಂತಿಯೊಬ್ಬರಿಗೆ ಆಟೋ ಹಿಡಿದು ಮನೆ ತಲುಪಿಸುವ ಕಾರ್ಯ ಮಾಡಿದ್ದ ಪೊಲೀಸ್ ಪೇದೆಯ ಕಾರ್ಯದ ರೀತಿಯೇ ಇಂದು ಪೊಲೀಸ್ ವರಿಷ್ಠಾಧಿಕಾರಿ ಮಾಡಿ ಎಲ್ಲರ ಮನ ಗೆದ್ದಿದ್ದಾರೆ.
ಹೌದು, ಅಳಲು ತೋಡಿಕೊಳ್ಳಲು ಊಟ ಮಾಡದೇ ಬಂದ ಮಹಿಳೆಯೋರ್ವರಿಗೆ ಮೊದಲು ಊಟ ಮಾಡಿ ಎಂದು 100 ರೂ. ಕೊಟ್ಟು ಸಮಸ್ಯೆ ಪರಿಹರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಡಿ.ಆನಂದಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದ ಘಟನೆ ಕೊಳ್ಳೇಗಾಲದಲ್ಲಿ ನಡೆಯಿತು.
ಏನದು ಘಟನೆ:
ಹನೂರಿನ ಜಿ.ವಿ.ಗೌಡ ಬಡಾವಣೆ ನಿವಾಸಿ ಲಕ್ಷ್ಮಮ್ಮ ಎಂಬವರು ತಮ್ಮ ಅಣ್ಣನ ಮಗ ಮಂಜು ಎಂಬಾತನಿಗೆ 3 ಲಕ್ಷ ರೂ. ಸಾಲ ನೀಡಿದ್ದಾರೆ. ಆದರೆ, ಈಗ ಸಾಲ ಪಡೆದಾತ ಹಣವನ್ನೇ ನೀಡಿಲ್ಲ ಎಂದು ಮೋಸ ಮಾಡಿದ್ದಾನೆ ಎನ್ನುವುದು ಮಹಿಳೆ ಆರೋಪ. ಸಾಲ ನೀಡಿದ್ದಕ್ಕೆ ಲಕ್ಷ್ಮಮ್ಮ ಬಳಿ ಯಾವುದೇ ದಾಖಲೆ ಇರದಿದ್ದರಿಂದ ಹನೂರು ಠಾಣೆ ಪೊಲೀಸರು ಇದು ಸಿವಿಲ್ ವ್ಯಾಜ್ಯ ಎಂದು ಕೈ ಚೆಲ್ಲಿದ್ದಾರೆ ಎನ್ನಲಾಗಿದೆ.
ಇದರಿಂದ ಇಂದು ಕೊಳ್ಳೇಗಾಲ ಡಿವೈಎಸ್ಪಿ ಕಾಣಲು ಬಂದ ವೇಳೆ ಎಸ್ಪಿ ಅವರೇ ಎದುರಾಗಿದ್ದರಿಂದ ಅಳಲು ತೋಡಿಕೊಂಡಿದ್ದಾರೆ. ಬಳಿಕ, ಊಟ ಮಾಡಿದಿರಾ ಎಂಬ ಪ್ರಶ್ನೆಗೆ ಇಲ್ಲ ಎಂದಾಗ 100 ರೂ. ನೀಡಿ ಊಟ ಮಾಡಿ ಮೊದಲು ಎಂದು ಹೇಳಿ ಸಮಸ್ಯೆ ಪರಿಹರಿಸಲು ಕೊಳ್ಳೇಗಾಲ ಸಿಪಿಐ ಶ್ರೀಕಾಂತ್ ಅವರಿಗೆ ಸೂಚಿಸಿ ಮಹಿಳೆಗೆ ಸಾಂತ್ವನ ಹೇಳಿ ಜನಸ್ನೇಹಿ ಪೊಲೀಸ್ ಎನ್ನುವುದನ್ನು ಸಾರಿದ್ದಾರೆ.